ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡಕ್ಕೆ ಪ್ರಶಸ್ತಿ ಬೆಂಗಳೂರು: ಕಿಕ್‌ಸ್ಟಾರ್ಟ್‌ ಎಫ್‌ಸಿ ತಂಡವು ಕೆಎಸ್‌ಎಫ್‌ಎ ಆಶ್ರಯದಲ್ಲಿ ನಡೆದ ಕರ್ನಾಟಕ ಮಹಿಳಾ ಲೀಗ್‌ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಮೂರನೇ ಆವೃತ್ತಿಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಕಿಕ್‌ಸಾರ್ಟ್‌ ತಂಡವು 6–0 ಯಿಂದ ಪರಿಕ್ರಮ್‌ ಎಫ್‌ಸಿ ತಂಡವನ್ನು ಸುಲಭವಾಗಿ ಮಣಿಸಿತು. ಕಿಕ್‌ಸಾರ್ಟ್‌ ತಂಡದ ಕವಿಯಾ ಪಕ್ಕಿರಿಸಾಮಿ (17, 25, 45, 65 ನೇ ನಿಮಿಷ) ನಾಲ್ಕು ಗೋಲು ಗಳಿಸಿ ಮಿಂಚಿದರು. ಕರಿಷ್ಮಾ ಪುರುಷೋತ್ತಮ್ (5, 55ನೇ) ಎರಡು ಬಾರಿ ಚೆಂಡನ್ನು ಗುರಿ ಸೇರಿಸಿದರು. ಪರಿಕ್ರಮ್‌ ತಂಡವು ರನ್ನರ್‌ ಅಪ್‌ ಸ್ಥಾನ ಪಡೆಯಿತು. ಟೂರ್ನಿಯ ಉತ್ತಮ ಗೋಲ್‌ಕೀಪರ್‌– ಬಿತಿಕಾ ರಾಯ್ (ಪರಿಕ್ರಮ್‌), ಉತ್ತಮ ಡಿಫೆಂಡರ್‌– ಅಫ್ರೀನ್ ಪೀರ್ಬೊ (ಕಿಕ್‌ಸ್ಟಾರ್ಟ್), ಉತ್ತಮ ಮಿಡ್‌ ಫೀಲ್ಡರ್‌– ರಿವ್ಕಾ ರಾಮ್‌ಜಿ (ಕೆಂಪ್ ಎಫ್‌ಸಿ) ಮತ್ತು ಎಂ. ಐಶ್ವರ್ಯಾ (ಕಿಕ್‌ಸ್ಟಾರ್ಟ್‌) ಪ್ರಶಸ್ತಿ ಪಡೆದರು. ರೂಟ್ಸ್‌ ಎಫ್‌ಸಿಯ ಮೈಥಿಲಿ ಪಾರ್ವತಿ ವೈದ್ಯ ಟೂರ್ನಿಯ ಉತ್ತಮ ಆಟಗಾರ್ತಿಯಾಗಿ, ಕಿಕ್‌ಸ್ಟಾರ್ಟ್‌ನ ಕವಿಯಾ ಪಕ್ಕಿರಿಸಾಮಿ (19 ಗೋಲು) ಅತ್ಯಧಿಕ ಸ್ಕೋರರ್‌ ಆಗಿ ಹೊರಹೊಮ್ಮಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.