ಫುಟ್‌ಬಾಲ್‌: ಮಹಿಳಾ ತಂಡದ ಒಲಿಂಪಿಕ್ಸ್‌ ಕನಸು ಭಗ್ನ ತಾಷ್ಕೆಂಟ್‌: ಭಾರತ ಮಹಿಳಾ ಫುಟ್‌ಬಾಲ್‌ ತಂಡದವರು ಎಎಫ್‌ಸಿ ಅರ್ಹತಾ ಟೂರ್ನಿಯ ಎರಡನೇ ಪಂದ್ಯದಲ್ಲಿ 1–3 ಗೋಲುಗಳಿಂದ ವಿಯೆಟ್ನಾಂ ಎದುರು ಸೋಲುವುದರೊಂದಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಕಳೆದುಕೊಂಡರು. ಭಾರತ ತಂಡ ಮೊದಲ ಪಂದ್ಯದಲ್ಲಿ 0–7 ಗೋಲುಗಳಿಂದ ಜಪಾನ್‌ ತಂಡಕ್ಕೆ ಮಣಿದಿತ್ತು. ‘ಸಿ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಬುಧವಾರ ಉಜ್ಬೆಕಿಸ್ತಾನ ವಿರುದ್ದ ಆಡಲಿದೆ. ಆದರೆ ಆ ಪಂದ್ಯದಲ್ಲಿ ಗೆದ್ದರೂ, ಭಾರತ ತಂಡ ಮುಂದಿನ ಹಂತ ಪ್ರವೇಶಿಸುವುದಿಲ್ಲ. ಮೂರು ಗುಂಪುಗಳ ವಿಜೇತರು ಮತ್ತು ‘ರನ್ನರ್‌ ಅಪ್‌’ ಸ್ಥಾನ ಪಡೆದ ಒಂದು ತಂಡ ಅರ್ಹತಾ ಟೂರ್ನಿಯ ಮೂರನೇ ಹಾಗೂ ಫೈನಲ್‌ ಸುತ್ತು ಪ್ರವೇಶಿಸಲಿವೆ. ಭಾನುವಾರ ನಡೆದ ಪಂದ್ಯದಲ್ಲಿ ಹ್ಯೂನ್ ಎನ್‌ಹು (4ನೇ ನಿ.), ಟ್ರಾನ್‌ ಥಿ ಹಾಯ್ ಲಿನ್ (22) ಮತ್ತು ಫಾಮ್ ಹೆ ಯೆನ (73) ಅವರು ವಿಯೆಟ್ನಾಂ ಪರ ಗೋಲು ಗಳಿಸಿದರು. ಭಾರತ ತಂಡದ ಏಕೈಕ ಗೋಲನ್ನು ಸಂಧ್ಯಾ ರಂಗನಾಥನ್‌ ಅವರು 80ನೇ ನಿಮಿಷದಲ್ಲಿ ತಂದಿತ್ತರು. ಎಲ್ಲ ನಾಲ್ಕು ಗೋಲುಗಳು ಹೆಡರ್‌ ಮೂಲಕ ಬಂದದ್ದು ವಿಶೇಷ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.