ಬೆಂಗಳೂರು: ಫುಟ್‌ಬಾಲ್ ಆಟಗಾರ ಲತೀಫ್ ಖಾನ್ ನಿಧನ ಬೆಂಗಳೂರು: ಅಂತರರಾಷ್ಟ್ರೀಯ ಫುಟ್‌ಬಾಲ್ ಆಟಗಾರರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ‘ಖಾನ್ ಕುಟುಂಬ’ದ ಕುಡಿ ಲತೀಫ್ ಖಾನ್ (88) ಮಂಗಳವಾರ ನಿಧನರಾದರು. ಬೆಂಗಳೂರು ಮುಸ್ಲಿಮ್ಸ್ ತಂಡದಲ್ಲಿ 1953 ಮತ್ತು 54ರಲ್ಲಿ ಆಡಿದ್ದ ಅವರು ಹಲವು ಗೋಲುಗಳನ್ನು ಹೊಡೆದಿದ್ದರು. 1955ರಲ್ಲಿ ಅವರು ಎಲ್‌ಆರ್‌ಡಿಇ ತಂಡವನ್ನು ಸೇರಿಕೊಂಡರು. ನಂತರ ಅವರು ಕೋಲ್ಕತ್ತದ ಮೊಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್‌ನಲ್ಲಿ ಆಡಿದ್ದರು. ತಮ್ಮ ಅದ್ಭುತ ಕಾಲ್ಚಳಕದಿಂದ ಭಾರತ ತಂಡದ ಆಯ್ಕೆಗಾರರ ಗಮನ ಸೆಳೆದಿದ್ದರು. 1960ರ ರೋಮ್ ಒಲಿಂಪಿಕ್ ಕೂಟಕ್ಕೆ ಆಯ್ಕೆಯಾಗಿದ್ದ ಭಾರತ ತಂಡದ ರಾಷ್ಟ್ರೀಯ ಶಿಬಿರಕ್ಕೂ ಅರ್ಹತೆ ಗಳಿಸಿದ್ದರು. ಲತೀಫ್ ಅವರಿಗೆ ಒಬ್ಬ ಪುತ್ರ, ಮೂವರು ಪುತ್ರಿಯರು ಹಾಗೂ ಸಹೋದರ ಅಮ್ಜದ್ ಖಾನ್ ಇದ್ದಾರೆ. ಮಂಗಳವಾರ ಸಂಜೆ ಟ್ಯಾನರಿ ಗ್ರೇವ್‌ಯಾರ್ಡ್‌ನಲ್ಲಿ ಲತೀಫ್ ಅವರ ಅಂತಿಮ ಸಂಸ್ಕಾರ ನಡೆಯಿತು. ಫುಟ್‌ಬಾಲ್ ಕುಟುಂಬ: ಲತೀಫ್ ಅವರು ಬೆಂಗಳೂರಿನ ಕ್ರೆಸೆಂಟ್ಸ್ ಫುಟ್‌ಬಾಲ್ ಕ್ಲಬ್ ಸಂಸ್ಥಾಪಕರಾದ ಮೆಹಮೂದ್ ಖಾನ್ ಅವರ ಎರಡನೇ ಮಗ. ಲತೀಫ್ ಅವರ ಸಹೋದರರಾದ ಅಹಮದ್ ಖಾನ್ ಮತ್ತು ಸರ್ಮದ್ ಖಾನ್ ಅವರು ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅಮ್ಜದ್ ಖಾನ್ ಅವರು ಈಸ್ಟ್‌ ಬೆಂಗಾಲ್, ಸಿಐಎಲ್ ಮತ್ತು ಮೈಸೂರು ತಂಡಗಳನ್ನು ಪ್ರತಿನಿಧಿಸಿದ್ದರು. ಅದರಲ್ಲಿ ಅಹಮದ್ ಖಾನ್ ಅವರು ಎರಡು ಒಲಿಂಪಿಕ್ ಕೂಟಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ಲತೀಫ್ ಅವರೂ 1962ರಲ್ಲಿ ಸಂತೋಷ್‌ ಟ್ರೋಫಿ ಟೂರ್ನಿಯಲ್ಲಿ ಮೈಸೂರು ರಾಜ್ಯ ತಂಡವನ್ನು ಪ್ರತಿನಿಧಿಸಿದವರು. ಆ ಟೂರ್ನಿಯಲ್ಲಿ ಮೈಸೂರು ತಂಡವು ರನ್ನರ್ ಅಪ್ ಆಗಿತ್ತು. ಶ್ರೀಲಂಕಾದಲ್ಲಿ ನಡೆದಿದ್ದ ಪೆಂಟಾಗ್ಯುಲರ್ ಟೂರ್ನಿಯಲ್ಲಿ ಆಡಿದ್ದರು. ಏಷ್ಯನ್ ಚಿನ್ನದ ಪದಕ ವಿಜೇತ ಅರುಮೈನಾಯಗಂ ಮುಜಿಬುಲಾ ಅವರ ಸಮಕಾಲೀನ ಆಟಗಾರರಾಗಿದ್ದವರು ಲತೀಫ್. ಕೆಲವು ವರ್ಷಗಳ ಹಿಂದೆ ಅಹಮದ್ ಖಾನ್ ಮತ್ತು ಸರ್ಮದ್ ಖಾನ್ ನಿಧನರಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.