ಪಿಐಒ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ನಿಯೋಜನೆ: ಎಐಎಫ್ಎಫ್ ಚಿಂತನೆ ನವದೆಹಲಿ: ರಾಷ್ಟ್ರೀಯ ತಂಡಕ್ಕೆ ಭಾರತ ಮೂಲದ ಆಟಗಾರರನ್ನು (ಪಿಐಒ) ಆಯ್ಕೆ ಮಾಡುವ ಸಾಧ್ಯತೆಯನ್ನು ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್ಎಫ್) ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಅಂತಹ 24 ಆಟಗಾರರನ್ನು ಸಂಪರ್ಕಿಸಲಿದೆ ಎಂದು ಅಧ್ಯಕ್ಷ ಕಲ್ಯಾಣ್ ಚೌಬೆ ಹೇಳಿದ್ದಾರೆ. ಪಿಐಒ ಮತ್ತು ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಷಯ ದೀರ್ಘ ಕಾಲದಿಂದ ಚರ್ಚೆಯಲ್ಲಿದೆ. ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಇಗೊರ್ ಸ್ಟಿಮಾಕ್ ಅವರು ಭಾರತೀಯ ತಂಡಕ್ಕೆ ಪಿಐಒ ಆಟಗಾರರನ್ನು ಆಯ್ಕೆ ಮಾಡುವ ಅಗತ್ಯವನ್ನು ಈಗಾಗಲೇ ಪ್ರತಿಪಾದಿಸಿದ್ದಾರೆ. ಆದರೆ ಸಮಸ್ಯೆ ಎಂದರೆ ಭಾರತದ ಕಾನೂನಿನಲ್ಲಿ ದ್ವಿಪೌರತ್ವಕ್ಕೆ ಅವಕಾಶವಿಲ್ಲ. ಪಿಐಒ ಆಟಗಾರರು ಭಾರತದ ಪರ ಆಡಲು ಬಯಸಿದರೆ, ಅವರು ಭಾರತೀಯ ಪೌರತ್ವ ಪಡೆದುಕೊಳ್ಳಬೇಕು. ಪೌರತ್ವಕ್ಕೆ ಅರ್ಜಿ ಸಲ್ಲಿಸುವ ಮೊದಲು ಒಬ್ಬ ವ್ಯಕ್ತಿಯು ಒಂದು ವರ್ಷ ಭಾರತದಲ್ಲಿ ನೆಲೆಸಿರಬೇಕು. ‘ವಿಶ್ವದಾದ್ಯಂತ ಆಡುತ್ತಿರುವ 24 ಪಿಐಒ ಆಟಗಾರರನ್ನು ಸಂಪರ್ಕಿಸುವ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಆದರೆ, ದ್ವಿ ಪೌರತ್ವದ ಸಮಸ್ಯೆ ಇದೆ ಎಂದು ತಿಳಿದಿದೆ (ಭಾರತಕ್ಕಾಗಿ ಆಡಲು ಅನುಮತಿ ಇಲ್ಲ). ಆದ್ದರಿಂದ, ಕೇಂದ್ರ ಸರ್ಕಾರದ ನಿಯಮಗಳ ಚೌಕಟ್ಟಿನೊಳಗೆ ಇದನ್ನು ಹೇಗೆ ಮಾಡಬಹುದು ಎಂಬುದನ್ನು ಪರಿಶೀಲಿಸಬೇಕಾಗಿದೆ’ ಎಂದು ಚೌಬೆ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಆದರೆ ಅವರು ಆಟಗಾರರ ಹೆಸರುಗಳನ್ನು ಬಹಿರಂಗಪಡಿಸಲಿಲ್ಲ. ‘ನಾವು ಈ ವಿಷಯದ ಬಗ್ಗೆ ಆಂತರಿಕ ಚರ್ಚೆ ನಡೆಸುತ್ತಿದ್ದೇವೆ ಮತ್ತು ಹೆಚ್ಚಿನ ಸ್ಪಷ್ಟತೆ ದೊರೆತ ನಂತರ ಮತ್ತಷ್ಟು ವಿವರಗಳೊಂದಿಗೆ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.