ಫುಟ್‌ಬಾಲ್: ಎಸ್‌ಸಿಬಿ–ಮಹಾರಾಷ್ಟ್ರ ಆರೆಂಜ್‌ ಇಂದು ಬೆಂಗಳೂರು: ಭಾನುವಾರ ಬೆಂಗಳೂರು ಫುಟ್‌ಬಾಲ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐ ಲೀಗ್ –2 ಟೂರ್ನಿಯ ಪಂದ್ಯದಲ್ಲಿ ಸ್ಪೋರ್ಟಿಂಗ್ ಕ್ಲಬ್ ಬೆಂಗಳೂರು ಮತ್ತು ಮಹಾರಾಷ್ಟ್ರ ಆರೆಂಜ್ ಫುಟ್‌ಬಾಲ್ ಕ್ಲಬ್‌ ಮುಖಾಮುಖಿಯಾಗಲಿವೆ. ಮಧ್ಯಾಹ್ನ 3.30ಕ್ಕೆ ಪಂದ್ಯ ನಡೆಯಲಿದೆ. ಹಲವು ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಆಟಗಾರರು ದೈಹಿಕವಾಗಿ ಫಿಟ್ ಆಗಿದ್ದು, ಪಂದ್ಯ ಗೆಲ್ಲುವ ವಿಶ್ವಾಸ ಇದೆ ಎಂದು ಎಸ್‌ಸಿಬಿ ಕೋಚ್‌ ಚಂದ್ರಶೇಖರ್ ಚಿಂತನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹಿಂದಿನ ಪಂದ್ಯಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಗೆಲ್ಲುವ ಕಡೆ ಗಮನ ಹರಿಸಲಾಗುವುದು. ಈ ಟೂರ್ನಿಯಲ್ಲಿ ಎಂಟು ತಂಡಗಳು ಪಾಲ್ಗೊಂಡಿದ್ದು, ತವರಿನ ಪಂದ್ಯದ ಬಳಿಕ ಫೆ.1ರಂದು ಗೋವಾದಲ್ಲಿ ಟೆಂಪೊ ಎಫ್‌ಸಿ ವಿರುದ್ಧ ಆಡಲಾಗುವುದು. ಮೊದಲ ಎರಡು ತಂಡಗಳು ಐಲೀಗ್‌ನಲ್ಲಿ ಪಾಲ್ಗೊಳ್ಳುವ ಅರ್ಹತೆ ಗಳಿಸಲಿವೆ. ಕರ್ನಾಟಕ ಫುಟ್‌ಬಾಲ್ ಸಂಸ್ಥೆಯು ಫುಟ್‌ಬಾಲ್‌ ಕ್ಲಬ್‌ಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.