ಇಂಡಿಪೆಂಡೆನ್ಸ್ ಕಪ್ ಫುಟ್‌ಬಾಲ್‌: ಸಾಹಿಲ್ ಹ್ಯಾಟ್ರಿಕ್‌; ಇಸ್ಲಾಹಿಗೆ ಗೆಲುವು ಮಂಗಳೂರು: ಹ್ಯಾಟ್ರಿಕ್ ಗೋಲು ಗಳಿಸಿ ಮಿಂಚಿದ ಸಾಹಿಲ್ ಅವರು ಇಂಡಿಪೆಂಡೆನ್ಸ್ ಕಪ್‌ ಫುಟ್‌ಬಾಲ್ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಇಸ್ಲಾಹಿ ಶಾಲೆಯ ‘ಬಿ’ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಫುಟ್‌ಬಾಲ್ ಸಂಸ್ಥೆ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಿರುವ 26ನೇ ವರ್ಷದ ಟೂರ್ನಿಯ ಹೈಸ್ಕೂಲ್ ಬಾಲಕರ ವಿಭಾಗದ ಹಣಾಹಣಿಯಲ್ಲಿ ಇಸ್ಲಾಹಿ ಶಾಲೆ 3–0ಯಿಂದ ಮಿಲಾಗ್ರಿಸ್ ಕೇಂದ್ರೀಯ ಶಾಲೆ ‘ಎ’ ತಂಡವನ್ನು ಮಣಿಸಿತು. ಮಂಗಳವಾರದ ಮೂರು ಪಂದ್ಯಗಳು ಪೆನಾಲ್ಟಿ ಶೂಟೌಟ್‌ನಲ್ಲಿ ಕೊನೆಗೊಂಡವು. ಕಸಬಾ ಬೆಂಗ್ರೆ ಸರ್ಕಾರಿ ಶಾಲೆ ತಂಡದಿಂದ ತೀವ್ರ ಪೈಪೋಟಿ ಎದುರಿಸಿದ ಕಣ್ಣೂರು ಇಂಗ್ಲಿಷ್ ಮೀಡಿಯಂ ಶಾಲೆ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 5–4ರಿಂದ ಜಯ ಗಳಿಸಿತು. ಎಂ.ಎಚ್‌.ಇಂಟರ್‌ನ್ಯಾಷನಲ್ ಶಾಲೆ 4–2ರಲ್ಲಿ ಎಂಆರ್‌ಪಿಎಲ್ ಶಾಲೆ ವಿರುದ್ಧ ಮತ್ತು ರಹಮಾನಿಯಾ ಸ್ಕೂಲ್‌ 3–2ರಲ್ಲಿ ಕೇಂಬ್ರಿಜ್‌ ಸ್ಕೂಲ್ ವಿರುದ್ಧ ಗೆಲುವು ದಾಖಲಿಸಿತು. ಉಳಿದ ಪಂದ್ಯಗಳಲ್ಲಿ ಕಣಚೂರು ಶಾಲೆ ತಂಡ ಕೇಂಬ್ರಿಜ್‌ ಶಾಲೆ ವಿರುದ್ಧ 2–0ಯಿಂದ, ಎನ್‌ಐಟಿಕೆ ಸುರತ್ಕಲ್‌ ತಂಡ ಸೇಂಟ್ ಅಲೋಶಿಯಸ್ ‘ಎ’ ವಿರುದ್ಧ 2–0ಯಿಂದ, ಹಜರತ್ ಎಚ್‌ಎಂ ‘ಬಿ’ ತಂಡ ಉಚ್ಚಿಲ ಸರ್ಕಾರಿ ಶಾಲೆ ವಿರುದ್ಧ 2–0ಯಿಂದ, ಸುಳ್ಯದ ರೋಟರಿ ಶಾಲೆ 1–0ಯಿಂದ ಎಲಿಯಾರ್ ಪದವು ಇಸ್ಲಾಹಿ ಶಾಲೆ ವಿರುದ್ಧ, ಬದ್ರಿಯಾ ಎಚ್‌.ಎಚ್‌ ‘ಬಿ’ ತಂಡ ತಲಪಾಡಿಯ ಫಲಾ ಎಚ್‌.ಎಸ್‌ ವಿರುದ್ಧ 5–3ರಲ್ಲಿಜಯ ಸಾಧಿಸಿತು. ಮೌಲಾನ ಆಜಾದ್ ಮಾದರಿ ಶಾಲೆ 2–0ಯಿಂದ ವಿದ್ಯಾರತ್ನ ಶಾಲೆಯನ್ನು ಸೋಲಿಸಿತು. ಕೋಟೆಕಾರ್‌ನ ಮರ್ಕಜ್ ಎಚ್‌.ಎಸ್‌ 2–0ಯಿಂದ ಕೊಲ್ಯದ ಜೋಯ್‌ಲ್ಯಾಂಡ್ ‘ಬಿ’ ಶಾಲೆಯನ್ನು, ಮಣಿಪಾಲ್ ಸ್ಕೂಲ್‌ ‘ಬಿ’ 2–0ಯಿಂದ ಕಲ್ಕಡ್ಕ ಸರ್ಕಾರಿ ಹೈಸ್ಕೂಲ್‌ ತಂಡವನ್ನು ಮಣಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.