ರಿಯಲ್‌ ಮ್ಯಾಡ್ರಿಡ್‌ಗೆ ಎಂಬಾಪೆ: ಪ್ರೀತಿಗೆ ಭಾವುಕನಾದ ಆಟಗಾರ ಮ್ಯಾಡ್ರಿಡ್‌ : ಫ್ರಾನ್ಸ್‌ನ ಸೂಪರ್‌ಸ್ಟಾರ್ ಆಟಗಾರ ಕೀಲಿಯನ್‌ ಎಂಬಾಪೆ ಅವರು ಮಂಗಳವಾರ ರಿಯಲ್‌ ಮ್ಯಾಡ್ರಿಡ್‌ ತಂಡವನ್ನು ಅಧಿಕೃತವಾಗಿ ಸೇರ್ಪಡೆಗೊಂಡರು. ‘ನನ್ನ ಬಾಲ್ಯಕಾಲದ ಕನಸು ಇಂದು ನನಸಾಗಿದೆ’ ಎಂದು ಕ್ಲಬ್‌ನ ಸ್ಯಾಂಟಿಯಾಗೊ ಬೆರ್ನಬೇವು ಕ್ರೀಡಾಂಗಣದಲ್ಲಿ ನೆರೆದಿದ್ದ 80000 ಫುಟ್‌ಬಾಲ್‌ ಅಭಿಮಾನಿಗಳನ್ನು ಉದ್ದೇಶಿಸಿ ಹೇಳಿದರು. ಎಂಬಾಪೆ ಅವರನ್ನು ಕ್ಲಬ್‌ ತಂಡಕ್ಕೆ ಸ್ವಾಗತಿಸಲು ದಾಖಲೆ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಅವರು ಐದು ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಿದರು. ಅವರಿಗೆ ಕ್ಲಬ್‌ ಅಧ್ಯಕ್ಷ ಫ್ಲೊರೆಂಟಿನೊ ಪೆರೆಝ್‌ 9ನೇ ನಂಬರ್ ಜೆರ್ಸಿ ಹಸ್ತಾಂತರಿಸಿದರು. ಎಂಬಾಪೆ ಜೊತೆ ತಂದೆ–ತಾಯಿ ಇದ್ದರು. ಸಮಾರಂಭದಲ್ಲಿ ಕ್ಲಬ್‌ನ ಮಾಜಿ ತಾರಾ ಆಟಗಾರ ಜಿನೆದಿನ್‌ ಜಿದಾನೆ ಕೂಡ ಇದ್ದರು. ಪ್ರೇಕ್ಷಕರು ತಮ್ಮ ಹೆಸರನ್ನು ಕೂಗುತ್ತಿದ್ದಂತೆ ಅವರು ಭಾವುಕರಾದರು. ತಮಗೆ ನೀಡಿದ ಜೆರ್ಸಿಗೆ ಚುಂಬಿಸಿದರು. ‘ನನ್ನ ಕುಟುಂಬಕ್ಕೆ ಸಂತಸವಾಗಿದೆ. ನನ್ನ ತಾಯಿ ಭಾವನೆಗಳನ್ನು ತಡೆಯಲಾಗದೇ ಅತ್ತಿದ್ದಾರೆ’ ಎಂದು ಈ ಹಿಂದೆ ಪ್ಯಾರಿಸ್‌ ಸೇಂಟ್‌–ಜರ್ಮನ್‌ ತಂಡಕ್ಕೆ ಆಡಿದ್ದ 25 ವರ್ಷದ ಆಟಗಾರ ತಿಳಿಸಿದರು. ‘ಈ ಕ್ಲಬ್‌ಗೆ ನನ್ನ ಜೀವ ಮುಡಿಪಾಗಿಡುತ್ತೇನೆ’ ಎಂದೂ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.