ಬೆಂಗಳೂರು: ಫುಟ್‌ಬಾಲ್‌ ಪಂದ್ಯದ ವೇಳೆ ಸ್ಟ್ಯಾಂಡ್‌ ಕುಸಿತ; ಹಲವರಿಗೆ ಗಾಯ ಬೆಂಗಳೂರು: ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮುಖ್ಯಮಂತ್ರಿ ಕಪ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್‌ ವೇಳೆ ಉತ್ತರ ಸ್ಟ್ಯಾಂಡ್‌ನ ಕೆಳಗಿನ ಭಾಗ ಕುಸಿದು, ಹಲವರು ಗಾಯ ಗೊಂಡಿದ್ದಾರೆ ಎಂದು ವರದಿಯಾಗಿದೆ. ಶಾಂತಿನಗರ ವಿಧಾನಸಭಾ ಕ್ಷೇತ್ರ ಮತ್ತು ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರ ತಂಡಗಳ ನಡುವೆ ಫೈನಲ್‌ ಹಣಾಹಣಿ ನಡೆದಿತ್ತು. ಈ ವೇಳೆ ಗ್ಯಾಲರಿಗಳು ಪ್ರೇಕ್ಷಕರಿಂದ ತುಂಬಿದ್ದವು. ಈ ವೇಳೆ ಕುಸಿತ ಉಂಟಾಗಿದೆ. ಘಟನೆಯ ವಿಡಿಯೊವನ್ನು ಪ್ರೇಕ್ಷಕರೊಬ್ಬರು ಸೆರೆಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪಂದ್ಯ ಆರಂಭಗೊಂಡ 35ನೇ ನಿಮಿಷದಲ್ಲಿ ಉತ್ತರ ಸ್ಟ್ಯಾಂಡ್‌ನ ಗ್ಯಾಲರಿಯ ಒಂದು ಭಾಗವು ಕುಸಿದಿದೆ. ಜನರು ಭಯಭೀತರಾಗಿ ಓಡಿಹೋದರು. ಹತ್ತಕ್ಕೂ ಹೆಚ್ಚು ಮಂದಿಯನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಘಟನಾ ಸ್ಥಳದಲ್ಲಿದ್ದ ಮೆರ್ವಿನ್ ಇಮ್ಯಾನುಯೆಲ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.