ಸ್ಯಾಫ್‌ ಯು–20 ಫುಟ್‌ಬಾಲ್‌: ಸೆಮಿಫೈನಲ್‌ಗೆ ಭಾರತ ಕಠ್ಮಂಡು: ಮಂಗ್ಲೆಂನ್‌ತಾಂಗ್ ಕಿಪ್ಜೆನ್ ಅವರು ಕೊನೆಗಳಿಗೆಯಲ್ಲಿ ಗಳಿಸಿದ ಗೋಲಿನ ನೆರವಿನಿಂದ ಭಾರತ ತಂಡ 1–0 ಯಿಂದ ಮಾಲ್ಡೀವ್ಸ್‌ ತಂಡವನ್ನು ಸೋಲಿಸಿ ಸ್ಯಾಫ್ 20 ವರ್ಷದೊಳಗಿನವರ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ಫೈನಲ್ ತಲುಪಿತು. ಶುಕ್ರವಾರ ನಡೆದ ‘ಬಿ’ ಗುಂಪಿನ ಈ ಅಂತಿಮ ಪಂದ್ಯದ 95ನೇ ನಿಮಿಷ ಕಿಪ್ಜೆನ್‌ ಅಮೋಘ ರೀತಿ ಗೋಲು ಹೊಡೆದರು. ಇದರಿಂದ ‘ಬ್ಲೂ ಕೋಲ್ಟ್ಸ್‌’ ತಂಡ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು. ಸೋಮವಾರ ನಡೆಯುವ ಪಂದ್ಯದಲ್ಲಿ ಭಾರತ ಕಿರಿಯರ ತಂಡ, ‘ಎ’ ಗುಂಪಿನಲ್ಲಿ ರನ್ನರ್ ಅಪ್ ಆಗಿರುವ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಪಂದ್ಯದಲ್ಲಿ ಭಾರತ ತಂಡದ ಮೇಲುಗೈ ಎದ್ದುಕಂಡಿತು. ಸಾಕಷ್ಟು ಅವಕಾಶಗಳನ್ನೂ ಸೃಷ್ಟಿಸಿಕೊಂಡಿತು. 47ನೇ ನಿಮಿಷ ಕೆಲ್ವಿನ್ ಸಿಂಗ್‌ ಉತ್ತಮ ಅವಕಾಶದಲ್ಲಿ ಒದ್ದ ಚೆಂಡು ಅಡ್ಡಪಟ್ಟಿಯ ಮೇಲಿಂದ ಹೋಯಿತು. ಮಾಲ್ಡೀವ್ಸ್‌ಗೂ ವಿರಾಮಕ್ಕೆ ಮೊದಲು ಉತ್ತಮ ಅವಕಾಶ ದೊರಕಿತ್ತು. ಇದರಲ್ಲಿ ನಾಯಕ ಶಾನಾನ್ ರಶಾದ್‌ ಅವರ ಫ್ರೀಕಿಕ್‌ ಯತ್ನದಲ್ಲಿ ಚೆಂಡು ಅಡ್ಡಪಟ್ಟಿಯ ಕೆಲವೇ ಇಂಚು ಮೇಲಿಂದ ಹಾದುಹೋಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.