| ಭಾರತ–ಪಾಕಿಸ್ತಾನ ಪಂದ್ಯ ನೋಡಲು ತೆರಳುವೆ: ಪಿಸಿಬಿ ಅಧ್ಯಕ್ಷ ಝಕಾ ಲಾಹೋರ್: ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಅಧ್ಯಕ್ಷ ಝಕಾ ಅಶ್ರಫ್ ಅವರು ಅಹಮದಾಬಾದ್‌ನಲ್ಲಿ ಶನಿವಾರ ನಡೆಯಲಿರುವ ಬಹುನಿರೀಕ್ಷಿತ ಭಾರತ– ಪಾಕಿಸ್ತಾನ ಏಕದಿನ ವಿಶ್ವಕಪ್ ಪಂದ್ಯ ನೋಡಲು ಗುರುವಾರ ಭಾರತಕ್ಕೆ ಬರಲಿದ್ದಾರೆ. ವಿಶ್ವಕಪ್ ವೀಕ್ಷಿಸಲು ಪಾಕಿಸ್ತಾನದ ಮಾಧ್ಯಮದವರಿಗೂ ವೀಸಾ ನೀಡಲು ಪ್ರಕ್ರಿಯೆಗೆ ಹಸಿರುನಿಶಾನೆ ತೋರಲಾಗಿದೆ. ಸುಮಾರು 60 ಮಂದಿ ಪಾಕ್‌ ಪತ್ರಕರ್ತರು ವೀಸಾಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ವಿಳಂಬವಾದಲ್ಲಿ ಅವರು ಶನಿವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಮಹತ್ವದ ಪಂದ್ಯ ಕಳೆದುಕೊಳ್ಳಲಿದ್ದಾರೆ. ‘ಭಾರತಕ್ಕೆ ನನ್ನ ಪ್ರಯಾಣ ತಡಮಾಡಿದೆ. ಪಾಕಿಸ್ತಾನದ ಪತ್ರಕರ್ತರಿಗೆ ವೀಸಾ ಪಡೆಯಲು ಪಾಸ್‌ಪೋರ್ಟ್‌ ಸಲ್ಲಿಸಬೇಕೆಂಬ ಮಾಹಿತಿ ಖಚಿತವಾದ ನಂತರ ನಾನು ಗುರುವಾರ ಭಾರತಕ್ಕೆ ಹೋಗುತ್ತಿದ್ದೇನೆ’ ಎಂದು ಅಶ್ರಫ್ ನೀಡಿರುವ ಹೇಳಿಕೆಯನ್ನು ಪಿಸಿಬಿ ಬಿಡುಗಡೆ ಮಾಡಿದೆ. ‘ತಂಡಕ್ಕೆ ಪ್ರೇರಣೆ ನೀಡಲು ನಾನು ಭಾರಕ್ಕೆ ಹೋಗುತ್ತಿದ್ದೇನೆ. ಎಲ್ಲ ಪಂದ್ಯಗಳ ರೀತಿ ಭಾರತ ವಿರುದ್ಧ ಪಂದ್ಯವನ್ನೂ ನಿರ್ಭೀತಿಯಿಂದ ಆಡಿ ಎಂಬುದು ತಂಡಕ್ಕೆ ನನ್ನ ಸಂದೇಶ’ ಎಂದರು ಝಕಾ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.