ಡೆಂಗಿ ಜ್ವರ : ಚೆನ್ನೈನ ಆಸ್ಪತ್ರೆಗೆ ಶುಭಮನ್‌ ಗಿಲ್ ದಾಖಲು, ಬಿಡುಗಡೆ ನವದೆಹಲಿ: ಡೆಂಗಿಗೆ ತುತ್ತಾಗಿರುವ ಭಾರತ ಕ್ರಿಕೆಟ್‌ ತಂಡ ಆರಂಭಿಕ ಬ್ಯಾಟರ್‌ ಶುಭಮನ್ ಗಿಲ್‌ ಅವರ ಪ್ಲೇಟ್‌ಲೆಟ್‌ ಪ್ರಮಾಣ 1 ಲಕ್ಷಕ್ಕಿಂತ ಕಡಿಮೆಯಾಗಿದ್ದರಿಂದ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಅವರನ್ನು ಡಿಸ್‌ಚಾರ್ಜ್ ಮಾಡಲಾಗಿದೆ. ಹೀಗಾಗಿ ಅಕ್ಟೋಬರ್‌ 14 ರಂದು ನಡೆಯುವ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದಲ್ಲೂ ಆಡುವುದು ಅನುಮಾನವೆನಿಸಿದೆ. ಕಳೆದ ವಾರ ಚೆನ್ನೈಗೆ ಬಂದಿದ್ದ ಗಿಲ್ ಅವರಿಗೆ ಡೆಂಗಿ ಬಾಧಿಸಿರುವುದು ದೃಢವಾಗಿತ್ತು. ಕಳೆದೊಂದು ವಾರದಿಂದ ವಿಶ್ರಾಂತಿಯಲ್ಲಿದ್ದ ಅವರನ್ನು ಈಗ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಅವರನ್ನು ಬಿಡುಗಡೆಗೊಳಿಸಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯ ಆಡಿರಲಿಲ್ಲ. ಬುಧವಾರ ನಡೆಯಲಿರುವ ಅಫ್ಗಾನಿಸ್ತಾನದ ವಿರುದ್ಧದ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. ‘ಕಳೆದ ಎರಡು ದಿನಗಳಿಂದ ಚೆನ್ನೈನ ಹೊಟೇಲ್‌ ಕೊಠಡಿಯಲ್ಲೇ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರ ಪ್ಲೇಟ್‌ಲೆಟ್‌ ಪ್ರಮಾಣ 70 ಸಾವಿರಕ್ಕೆ ಇಳಿಯಿತು. ಡೆಂಗಿ ಬಾಧಿತರ ಪ್ಲೇಟ್‌ಲೆಟ್‌ ಪ್ರಮಾಣ 1 ಲಕ್ಷಕ್ಕಿಂತ ಕಡಿಮೆಗೆ ಇಳಿದರೆ ಅವರನ್ನು ಮುಂಜಾಗೃತ ಕ್ರಮವಾಗಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗುತ್ತದೆ. ಪ್ಲೇಟ್‌ಲೆಟ್‌ ಪ್ರಮಾಣ 1 ಲಕ್ಷಕ್ಕಿಂತ ಹೆಚ್ಚಾದರೆ ಅವರನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಚೆನ್ನೈನ ಪ್ರಖ್ಯಾತ ಮಲ್ಟಿಕೇರ್‌ ಆಸ್ಪತ್ರೆ ‘ಕಾವೇರಿ’ಗೆ ಗಿಲ್ ಅವರನ್ನು ದಾಖಲು ಮಾಡಲಾಗಿತ್ತು. ಭಾರತ ಕ್ರಿಕೆಟ್‌ ತಂಡದ ವೈದ್ಯ ರಿಜ್ವಾನ್‌ ಅವರು ಗಿಲ್‌ ಅವರ ಆರೋಗ್ಯದ ಮೇಲೆ ನಿಗಾ ವಹಿಸುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.