ವಿಶ್ವಕಪ್‌ನಲ್ಲಿ ಖಾತೆ ತೆರೆಯದೆ ಔಟಾದ ಭಾರತದ 2ನೇ ಆರಂಭಿಕ ಜೋಡಿ ರೋಹಿತ್–ಇಶಾನ್ ಚೆನ್ನೈ: ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟರ್‌ಗಳಾದ ರೋಹಿತ್‌ ಶರ್ಮಾ ಹಾಗೂ ಇಶಾನ್‌ ಕಿಶಾನ್‌, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರು. ಆ ಮೂಲಕ ವಿಶ್ವಕಪ್‌ ಪಂದ್ಯದಲ್ಲಿ ಖಾತೆ ತೆರೆಯದೆ ವಿಕೆಟ್‌ ಒಪ್ಪಿಸಿದ ಭಾರತದ ಎರಡನೇ ಆರಂಭಿಕ ಜೋಡಿ ಎನಿಸಿತು. ಭಾರತದ ಆರಂಭಿಕರು ವಿಶ್ವಕಪ್‌ ಪಂದ್ಯದಲ್ಲಿ ಮೊದಲ ಬಾರಿಗೆ ಸೊನ್ನೆ ಸುತ್ತಿದ್ದು 1983ರಲ್ಲಿ. ಜಿಂಬಾಬ್ವೆ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 2 ಎಸೆತಗಳನ್ನು ಆಡಿದ್ದ ಸುನಿಲ್‌ ಗವಾಸ್ಕರ್ ಮತ್ತು 13 ಎಸೆತಗಳನ್ನು ಎದುರಿಸಿದ್ದ ಕೃಷ್ಣಮಾಚಾರಿ ಶ್ರೀಕಾಂತ್‌ ಅವರು ಖಾತೆ ತೆರೆಯದೆ ಔಟಾಗಿದ್ದರು. 1983ರ ಟೂರ್ನಿಯಲ್ಲಿ ಕಪಿಲ್‌ ದೇವ್‌ ನಾಯಕತ್ವದ ಟೀಂ ಇಂಡಿಯಾ ಮೊದಲ ಸಲ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಎತ್ತಿ ಹಿಡಿದಿತ್ತು. ಭಾರತಕ್ಕೆ ಜಯ ತಂದುಕೊಟ್ಟ ಕೊಹ್ಲಿ–ರಾಹುಲ್ ಭಾರತ ಹಾಗೂ ಆಸ್ಟ್ರೇಲಿಯಾ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ (ಅಕ್ಟೋಬರ್‌ 8 ರಂದು) ಸೆಣಸಾಟ ನಡೆಸಿದವು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49.3 ಓವರ್‌ಗಳಲ್ಲಿ 199 ರನ್‌ ಗಳಿಸಿ ಸರ್ವಪತನ ಕಂಡಿತು. ಸುಲಭ ಗುರಿ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಜ್ವರದಿಂದ ಬಳಲುತ್ತಿರುವ ಶುಭಮನ್‌ ಗಿಲ್‌ ಬದಲು ಈ ಪಂದ್ಯದಲ್ಲಿ ಇನಿಂಗ್ಸ್‌ ಆರಂಭಿಸುವ ಅವಕಾಶ ಪಡೆದ ಇಶಾನ್‌ ಕಿಶನ್‌ (0) ನಿರಾಸೆ ಮೂಡಿಸಿದರು. ಮಿಚೇಲ್‌ ಸ್ಟಾರ್ಕ್‌ ಹಾಕಿದ ಮೊದಲ ಓವರ್‌ನ ಕೊನೇ ಎಸೆತದಲ್ಲಿ ಔಟಾದರು. ಜೋಷ್ ಹ್ಯಾಜಲ್‌ವುಡ್ ಎಸೆದ ಎರಡನೇ ಓವರ್‌ನಲ್ಲಿ ರೋಹಿತ್ ಶರ್ಮಾ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಅದೇ ಓವರ್‌ನ ಕೊನೇ ಎಸೆತದಲ್ಲಿ ಶ್ರೇಯಸ್ ಅಯ್ಯರ್, ಸೊನ್ನೆ ಸುತ್ತಿದರು. ಹೀಗಾಗಿ ಆತಿಥೇಯ ತಂಡ ಕೇವಲ ಎರಡು ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಯಾದ ವಿರಾಟ್‌ ಕೊಹ್ಲಿ ಹಾಗೂ ಕನ್ನಡಿಗ ಕೆ.ಎಲ್‌.ರಾಹುಲ್‌, ಅಮೋಘ ಬ್ಯಾಟಿಂಗ್‌ ಮೂಲಕ 4 ವಿಕೆಟ್‌ ಅಂತರದ ಗೆಲುವು ತಂದುಕೊಟ್ಟರು. ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದ ಈ ಇಬ್ಬರು ನಾಲ್ಕನೇ ವಿಕೆಟ್‌ ಪಾಲುದಾರಿಕೆಯಲ್ಲಿ 165 ರನ್ ಕಲೆಹಾಕಿದರು. ಹೀಗಾಗಿ ಭಾರತ ಇನ್ನೂ 8.4 ಓವರ್‌ಗಳು ಬಾಕಿ ಇರುವಂತೆಯೇ 201 ರನ್ ಗಳಿಸಿತು. ಕೊಹ್ಲಿ 85 ರನ್ ಗಳಿಸಿ ಔಟಾದರೆ, 97 ರನ್ ಬಾರಿಸಿ ಅಜೇಯವಾಗಿ ಉಳಿದ ರಾಹುಲ್‌ ಟೀಂ ಇಂಡಿಯಾವನ್ನು ಜಯದ ದಡ ಸೇರಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.