| ನೆದರ್ಲೆಂಡ್ಸ್ ಗೆಲುವಿಗೆ 323 ರನ್ ಗುರಿ ನೀಡಿದ ನ್ಯೂಜಿಲೆಂಡ್ ಹೈದರಾಬಾದ್: ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮಣಿಸಿ ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್ ಅಭಿಯಾನ ಅರಂಭಿಸಿರುವ ನ್ಯೂಜಿಲೆಂಡ್ ತಂಡ ನೆದರ್ಲೆಂಡ್ಸ್‌ಗೆ ಕಠಿಣ ಗುರಿ ನೀಡಿದೆ. ಹೈದರಾಬಾದ್‌ನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್, ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 322 ರನ್ ಕಲೆಹಾಕಿದೆ. ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು ಖಾತೆ ತೆರೆಯಲು ವಿಫಲವಾಗಿದ್ದ ವಿಲ್‌ ಯಂಗ್‌ (70), ಶತಕ ಸಿಡಿಸಿದ್ದ ರಚಿನ್ ರವೀಂದ್ರ (51) ಹಾಗೂ ನಾಯಕ ಟಾಮ್ ಲಥಾಮ್ (53) ಅರ್ಧಶತಕ ಸಿಡಿಸಿ ಮಿಂಚಿದರು. ಡೆರಿಲ್ ಮಿಚೆಲ್ (48) ಹಾಗೂ ಕೊನೆಯಲ್ಲಿ ಗುಡುಗಿದ ಮಿಚೆಲ್ ಸ್ಯಾಂಟನರ್ (ಅಜೇಯ 37) ಉಪಯುಕ್ತ ಕೊಡುಗೆ ನೀಡಿದರು. ನೆದರ್ಲೆಂಡ್ಸ್ ಪರ ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್ ಹಾಗೂ ರೊಲಾಫ್ ವ್ಯಾನ್ ಡೆರ್ ಮರ್ವೆ ತಲಾ ಎರಡು ವಿಕೆಟ್‌ ಕಿತ್ತರೆ, ಇನ್ನೊಂದು ವಿಕೆಟ್‌ ಬಾಸ್ ಡಿ ಲೀಡ್ ಪಾಲಾಯಿತು. ಸ್ಕಾಟ್ ಎಡ್ವರ್ಡ್ಸ್ ಬಳಗವು ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಸೋತಿದೆ. ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲುವುದು ಮಹತ್ವಾದ್ದಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.