| ನೆದರ್ಲೆಂಡ್ಸ್‌ಗೆ 2ನೇ ಸೋಲು; ಜಯದ ಓಟ ಮುಂದುವರಿಸಿದ ನ್ಯೂಜಿಲೆಂಡ್ ಹೈದರಾಬಾದ್‌ : ವಿಲ್‌ ಯಂಗ್, ರಚಿನ್‌ ರವೀಂದ್ರ ಮತ್ತು ಟಾಮ್‌ ಲಥಾಮ್‌ ಗಳಿಸಿದ ಅರ್ಧಶತಕಗಳು ಮತ್ತು ಮಿಚೆಲ್‌ ಸ್ಯಾಂಟನರ್ ಅವರ ಕೈಚಳಕ, ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ತಂಡಕ್ಕೆ ಸತತ ಎರಡನೇ ಗೆಲುವು ತಂದುಕೊಟ್ಟಿತು. ರಾಜೀವ್‌ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕಿವೀಸ್‌ ತಂಡ 99 ರನ್‌ಗಳಿಂದ ನೆದರ್ಲೆಂಡ್ಸ್‌ ತಂಡವನ್ನು ಮಣಿಸಿತು. ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌, ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 322 ರನ್‌ ಪೇರಿಸಿತು. ಆರಂಭಿಕ ಬ್ಯಾಟರ್‌ ಯಂಗ್ (70; 80 ಎ., 4X7, 6X2), ಯುವ ಆಟಗಾರ ರಚಿನ್‌ (51; 51 ಎ., 4X3, 6X1) ಮತ್ತು ನಾಯಕ ಲಥಾಮ್‌ (53; 46 ಎ., 4X6, 6X1) ಅವರು ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು. ನೆದರ್ಲೆಂಡ್ಸ್‌ ತಂಡದ ಹೋರಾಟ 46.3 ಓವರ್‌ಗಳಲ್ಲಿ 223 ರನ್‌ಗಳಿಗೆ ತೆರೆಕಂಡಿತು. 59 ರನ್‌ಗಳಿಗೆ ಐದು ವಿಕೆಟ್‌ ಪಡೆದ ಎಡಗೈ ಸ್ಪಿನ್ನರ್‌ ಮಿಚೆಲ್‌ ಸ್ಯಾಂಟನರ್‌, ಡಚ್‌ ತಂಡದ ಪತನಕ್ಕೆ ಕಾರಣರಾದರು. ಮೊದಲ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಶರಣಾಗಿದ್ದ ಸ್ಕಾಟ್‌ ಎಡ್ವರ್ಡ್ಸ್‌ ಬಳಗಕ್ಕೆ ಎದುರಾದ ಸತತ ಎರಡನೇ ಸೋಲು ಇದು. ಸವಾಲಿನ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ಪರ ಕಾಲಿನ್ ಎಕರ್ಮನ್ (69; 73 ಎ., 4X5) ಮಾತ್ರ ಛಲದ ಆಟವಾಡಿದರು. ಇತರ ಬ್ಯಾಟರ್‌ಗಳು ಸ್ಯಾಂಟನರ್‌ ಮತ್ತು ಮ್ಯಾಟ್‌ ಹೆನ್ರಿ (40ಕ್ಕೆ 3) ಅವರ ದಾಳಿಯನ್ನು ಎದುರಿಸಿ ನಿಲ್ಲುವಲ್ಲಿ ವಿಫಲರಾದರು. ವಿಕ್ರಮ್‌ಜೀತ್‌ ಸಿಂಗ್ (12) ಅವರ ವಿಕೆಟ್ ಪಡೆದ ಹೆನ್ರಿ, ಎದುರಾಳಿ ತಂಡಕ್ಕೆ ಮೊದಲ ಆಘಾತ ನೀಡಿದರು. ಇನ್ನೊಬ್ಬ ಆರಂಭಿಕ ಬ್ಯಾಟರ್ ಮ್ಯಾಕ್ಸ್ ಒಡೋವ್ಡ್ (16) ಅವರನ್ನು ಸ್ಯಾಂಟನರ್‌ ಪೆವಿಲಿಯನ್‌ಗೆ ಕಳುಹಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಉತ್ತಮ ಆರಂಭ ಪಡೆದರೂ, ದೊಡ್ಡ ಜತೆಯಾಟ ನೀಡುವಲ್ಲಿ ವಿಫಲರಾದರು. ಆಗಿಂದಾಗ್ಗೆ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸೋಲಿನ ಹಾದಿ ಹಿಡಿಯಿತು. ಉತ್ತಮ ಆರಂಭ: ನ್ಯೂಜಿಲೆಂಡ್‌ ತಂಡಕ್ಕೆ ಕಾನ್ವೆ (32) ಮತ್ತು ಯಂಗ್‌ ಅವರು ಮೊದಲ ವಿಕೆಟ್‌ಗೆ 67ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ನೆದರ್ಲೆಂಡ್ಸ್‌ ವೇಗಿಗಳು ಮೂರು ‘ಮೇಡನ್‌’ ಓವರ್‌ಗಳನ್ನು ಹಾಕುವ ಮೂಲಕ ಕಿವೀಸ್‌ ಆರಂಭಿಕ ಬ್ಯಾಟರ್‌ಗಳನ್ನು ಕಾಡಿದ್ದರು. ಆದರೆ ಪರಿಸ್ಥಿತಿಗೆ ಹೊಂದಿಕೊಂಡ ಬಳಿಕ ಇವರಿಬ್ಬರೂ ರಟ್ಟೆಯರಳಿಸಿದರು. ರನ್‌ ವೇಗ ಹೆಚ್ಚಿಸುವ ಭರದಲ್ಲಿ ಕಾನ್ವೆ, ರೊಲಾಫ್ ವ್ಯಾನ್ ಡೆರ್ ಮರ್ವ್‌ಗೆ ವಿಕೆಟ್‌ ಒಪ್ಪಿಸಿದರು. ಕಳೆದ ಪಂದ್ಯದ ‘ಹೀರೊ’ ರಚಿನ್‌ ಅವರು ಯಂಗ್‌ ಜತೆ ಎರಡನೇ ವಿಕೆಟ್‌ಗೆ 77 ರನ್‌ ಕಲೆಹಾಕಿದರು. ಇವರಿಬ್ಬರು ಔಟಾದ ಬಳಿಕ ಮಿಚೆಲ್‌ (48) ಮತ್ತು ಲಥಾಮ್‌ ಅವರು ಇನಿಂಗ್ಸ್‌ ಬೆಳೆಸಿದರು. ಅಂತಿಮ ಓವರ್‌ಗಳಲ್ಲಿ ಸ್ಯಾಂಟನರ್‌ (ಔಟಾಗದೆ 36, 17 ಎ, 4X3, 6X2) ಅಬ್ಬರಿಸಿದ್ದರಿಂದ ತಂಡದ ಮೊತ್ತ 300ರ ಗಡಿ ದಾಟಿತು. ಕೊನೆಯ ಮೂರು ಓವರ್‌ಗಳಲ್ಲಿ ಕಿವೀಸ್‌, 50 ರನ್‌ ಕಲೆಹಾಕಿತು. ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 322 (ಡೆವೊನ್‌ ಕಾನ್ವೆ 32, ವಿಲ್ ಯಂಗ್ 70, ರಚಿನ್‌ ರವೀಂದ್ರ 51, ಡೆರಿಲ್‌ ಮಿಚೆಲ್ 48, ಟಾಮ್‌ ಲಥಾಮ್ 53, ಮಿಚೆಲ್‌ ಸ್ಯಾಂಟನರ್‌ ಔಟಾಗದೆ 36, ಆರ್ಯನ್‌ ದತ್‌ 62ಕ್ಕೆ 2, ಪಾಲ್ ವ್ಯಾನ್ ಮೀಕೆರೆನ್ 59ಕ್ಕೆ 2, ರೊಲಾಫ್ ವ್ಯಾನ್ ಡೆರ್ ಮರ್ವ್ 56ಕ್ಕೆ 2) ನೆದರ್ಲೆಂಡ್ಸ್: 46.3 ಓವರ್‌ಗಳಲ್ಲಿ 223 (ಕಾಲಿನ್‌ ಎಕರ್ಮನ್ 69, ತೇಜಾ ನಿಡಮಾನುರು 21, ಸ್ಕಾಟ್‌ ಎಡ್ವರ್ಡ್ಸ್ 30, ಸೈಬ್ರಾಂಡ್ 29, ಮಿಚೆಲ್‌ ಸ್ಯಾಂಟನರ್‌ 59ಕ್ಕೆ 5, ಮ್ಯಾಟ್‌ ಹೆನ್ರಿ 40ಕ್ಕೆ 3) ಫಲಿತಾಂಶ: ನ್ಯೂಜಿಲೆಂಡ್‌ಗೆ 99 ರನ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.