ವಿಶ್ವಕಪ್‌ ಕ್ರಿಕೆಟ್‌: ನಾಳೆಯಿಂದ ಬೆಂಗಳೂರು ಪಂದ್ಯಗಳ ಟಿಕೆಟ್ ಮಾರಾಟ ಆರಂಭ ಬೆಂಗಳೂರು: ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಪಂದ್ಯಗಳ ಟಿಕೆಟ್‌ ಮಾರಾಟ (ಕ್ರೀಡಾಂಗಣದ ಕೌಂಟರ್‌ಗಳಲ್ಲಿ) ಅ.17 ರಂದು ಆರಂಭವಾಗಲಿದೆ. ನ.12 ರಂದು ನಡೆಯಲಿರುವ ಭಾರತ– ನೆದರ್ಲೆಂಡ್ಸ್‌ ನಡುವಣ ಪಂದ್ಯ ಹೊರತುಪಡಿಸಿ ಇತರ ನಾಲ್ಕು ಪಂದ್ಯಗಳ ಟಿಕೆಟ್‌ ಮಾರಾಟದ ದಿನಾಂಕ ಹಾಗೂ ಟಿಕೆಟ್‌ ದರದ ವಿವರಗಳನ್ನು ಕೆಎಸ್‌ಸಿಎ ಭಾನುವಾರ ಪ್ರಕಟಿಸಿದೆ. ಅ.17, 18 ಮತ್ತು 19 ರಂದು ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಕೌಂಟರ್‌ಗಳು ತೆರೆದಿರಲಿವೆ. ಕ್ರೀಡಾಂಗಣದ ಗೇಟ್‌ ಸಂಖ್ಯೆ 2 ಮತ್ತು 4 (ಕಬ್ಬನ್‌ ರಸ್ತೆ) ಹಾಗೂ ಗೇಟ್‌ ಸಂಖ್ಯೆ 16 ಮತ್ತು 18ರಲ್ಲಿ (ಕ್ವೀನ್ಸ್‌ ರಸ್ತೆ) ತೆರೆಯಲಾಗುವ ಕೌಂಟರ್‌ಗಳಲ್ಲಿ ಟಿಕೆಟ್‌ಗಳನ್ನು ಖರೀದಿಸಬಹುದು. ಒಬ್ಬರಿಗೆ ಗರಿಷ್ಠ ಎರಡು ಟಿಕೆಟ್‌ಗಳನ್ನು ಮಾತ್ರ ಖರೀದಿಸಬಹುದು. ಕ್ರೆಡಿಟ್‌ ಕಾರ್ಡ್‌/ ಡೆಬಿಟ್‌ ಕಾರ್ಡ್‌/ ಯುಪಿಐ ಪಾವತಿಗೆ ಮಾತ್ರ ಅವಕಾಶವಿದ್ದು, ನಗದು ಸ್ವೀಕರಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ವಿವಿಧ ಗ್ಯಾಲರಿಗಳ ಟಿಕೆಟ್‌ ದರವನ್ನು ಕನಿಷ್ಠ 750 ರಿಂದ ಗರಿಷ್ಠ ₹ 25 ಸಾವಿರದವರೆಗೆ ನಿಗದಿಪಡಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.