2023 : ಕಮಿನ್ಸ್‌ ಪಡೆಗೆ ಮೊದಲ ಜಯದ ಸಿಹಿ ಲಖನೌ: ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಆಸ್ಟ್ರೇಲಿಯಾ ತಂಡ, ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಸೋಮವಾರ ಮೊದಲ ಜಯದ ಸಿಹಿಯುಂಡಿತು. ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಲ್‌ರೌಂಡ್‌ ಆಟವಾಡಿದ ಪ್ಯಾಟ್‌ ಕಮಿನ್ಸ್‌ ಬಳಗ, ಐದು ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು. ಪಾಯಿಂಟ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಆಸ್ಟ್ರೆಲಿಯಾ, ಈ ಗೆಲುವಿನೊಂದಿಗೆ ಎರಡು ಸ್ಥಾನ ಮೇಲಕ್ಕೇರಿದೆ. ಲಂಕಾ ತಂಡ ತಾನಾಡಿದ ಮೂರು ಪಂದ್ಯಗಳಲ್ಲೂ ಮುಖಭಂಗ ಅನುಭವಿಸಿದೆ. ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ 43.3 ಓವರ್‌ಗಳಲ್ಲಿ 209 ರನ್‌ಗಳಿಗೆ ಆಲೌಟಾಯಿತು. 47 ರನ್‌ಗಳಿಗೆ 4 ವಿಕೆಟ್‌ ಪಡೆದ ಆ್ಯಡಮ್‌ ಜಂಪಾ ಮತ್ತು ಕಮಿನ್ಸ್‌ (32ಕ್ಕೆ 2) ಅವರು ಎದುರಾಳಿ ಬ್ಯಾಟರ್‌ಗಳನ್ನು ನಿಯಂತ್ರಿಸಿದರು. ಆಸ್ಟ್ರೇಲಿಯಾ ತಂಡ 35.2 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಅರ್ಧಶತಕ ಗಳಿಸಿದ ಮಿಚೆಲ್‌ ಮಾರ್ಷ್‌ (52; 51 ಎ., 4X9) ಮತ್ತು ಜೋಶ್‌ ಇಂಗ್ಲಿಸ್‌ (58; 59 ಎ., 4X5, 6X1) ಗೆಲುವಿನ ಹಾದಿ ಸುಗಮಗೊಳಿಸಿದರು. ಸಾಧಾರಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಆರಂಭದಲ್ಲಿ ಅಲ್ಪ ಆತಂಕ ಎದುರಿಸಿತು. ದಿಲ್ಶಾನ್ ಮಧುಶಂಕಾ ಅವರು ನಾಲ್ಕನೇ ಓವರ್‌ನ ಮೊದಲ ಹಾಗೂ ಕೊನೆಯ ಎಸೆತದಲ್ಲಿ ಕ್ರಮವಾಗಿ ಡೇವಿಡ್‌ ವಾರ್ನರ್‌ (11) ಮತ್ತು ಸ್ಟೀವನ್‌ ಸ್ಮಿತ್‌ (0) ಅವರನ್ನು ಎಲ್‌ಬಿ ಬಲೆಯಲ್ಲಿ ಕೆಡವಿದರು. ಆದರೆ ಮಾರ್ಷ್‌ ಮತ್ತು ಲಾಬುಶೇನ್‌ (40; 60 ಎ.) ಮೂರನೇ ವಿಕೆಟ್‌ಗೆ 57 ರನ್‌ ಸೇರಿಸಿ ಅಪಾಯ ದೂರ ಮಾಡಿದರು. ಲಾಬುಶೇನ್‌ ಅವರು ವಿಕೆಟ್‌ ಕಾಯ್ದುಕೊಂಡರೆ, ಮತ್ತೊಂದು ಬದಿಯಲ್ಲಿ ಮಾರ್ಷ್‌ ಆಕ್ರಮಣಕಾರಿ ಆಟವಾಡಿ ಲಂಕಾ ಬೌಲರ್‌ಗಳು ಹಿಡಿತ ಸಾಧಿಸದಂತೆ ನೋಡಿಕೊಂಡರು. ಅರ್ಧಶತಕ ಪೂರೈಸಿದ ಮಾರ್ಷ್‌, ರನೌಟ್‌ ಆದರು. ಬಳಿಕ ಬಂದ ಇಂಗ್ಲಿಸ್‌ ಅವರು ಲಾಬುಶೇನ್‌ ಜತೆ 4ನೇ ವಿಕೆಟ್‌ಗೆ 77 ರನ್‌ಗಳನ್ನು ಸೇರಿಸಿ ಲಂಕಾ ತಂಡದ ಮರುಹೋರಾಟದ ಬಾಗಿಲು ಮುಚ್ಚಿದರು. ಮಹೀಷ ತೀಕ್ಷಣ ಮತ್ತು ದುನಿತ್ ವೆಳಾಲಗೆ ಅವರ ಸ್ಪಿನ್‌ ದಾಳಿಯನ್ನು ಇವರು ಲೀಲಾಜಾಲವಾಗಿ ಎದುರಿಸಿದರು. ಇವರಿಬ್ಬರು ಔಟಾದ ಬಳಿಕ ಬಂದ ಗ್ಲೆನ್‌ ಮ್ಯಾಕ್ಸ್‌ವೆಲ್‌ (ಔಟಾಗದೆ 31; 21 ಎ., 4X4, 6X2) ಹಾಗೂ ಮಾರ್ಕಸ್‌ ಸ್ಟೊಯಿನಿಸ್‌ (ಔಟಾಗದೆ 20; 10 ಎ., 4X2, 6X1) ಬೀಸಾಟವಾಡಿ ತಂಡವನ್ನು ಬೇಗನೇ ಗೆಲುವಿನತ್ತ ಮುನ್ನಡೆಸಿದರು. ಉತ್ತಮ ಆರಂಭ, ಹಠಾತ್‌ ಕುಸಿತ: ಟಾಸ್‌ ಗೆದ್ದ ಲಂಕಾ ತಂಡದ ನಾಯಕ ಕುಶಾಲ್ ಮೆಂಡಿಸ್‌ ಬ್ಯಾಟಿಂಗ್‌ ಆಯ್ದುಕೊಂಡರು. ವಿಕೆಟ್‌ ನಷ್ಟವಿಲ್ಲದೆ 125 ರನ್‌ ಗಳಿಸಿದ್ದ ತಂಡ ಆ ಬಳಿಕ ಹಠಾತ್‌ ಕುಸಿತ ಕಂಡಿತು. 84 ರನ್‌ಗಳಿಗೆ 10 ವಿಕೆಟ್‌ಗಳನ್ನು ಕಳೆದುಕೊಂಡಿತು. ಪಥುಮ್‌ ನಿಸಾಂಕ (61; 67 ಎ., 4X8) ಮತ್ತು ಕುಶಾಲ್‌ ಪೆರೆರಾ (78; 82 ಎ., 4X12) ಅವರು ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಎದುರಾಳಿ ತಂಡದ ಆರಂಭಿಕ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದ ಈ ಜೋಡಿ 21.4 ಓವರ್‌ಗಳಲ್ಲಿ 125 ರನ್‌ ಕಲೆಹಾಕಿತು. ನಿಸಾಂಕ ಅವರ ವಿಕೆಟ್‌ ಪಡೆದ ಕಮಿನ್ಸ್‌ ಈ ಜತೆಯಾಟ ಮುರಿದರು. ವಾರ್ನರ್‌ ಅವರ ಅತ್ಯುತ್ತಮ ಕ್ಯಾಚ್‌ಗೆ ನಿಸಾಂಕ ಔಟಾದರು. ಐದು ಓವರ್‌ಗಳ ಬಳಿಕ ಪೆರೆರಾ ಅವರನ್ನು ಕಮಿನ್ಸ್‌ ಬೌಲ್ಡ್‌ ಮಾಡಿದರು. ಈ ಎರಡು ವಿಕೆಟ್‌ಗಳ ಪತನವು ಆಸ್ಟ್ರೇಲಿಯಾ ಬೌಲರ್‌ಗಳು ಪಾರಮ್ಯ ಸಾಧಿಸಲು ಅನುವು ಮಾಡಿಕೊಟ್ಟಿತು. ಜಂಪಾ ಅವರು ಕುಶಾಲ ಮೆಂಡಿಸ್‌ (9) ಮತ್ತು ಸದೀರ ಸಮರವಿಕ್ರಮ (8) ಅವರನ್ನು ಎರಡು ಓವರ್‌ಗಳ ಅಂತರ ದಲ್ಲಿ ಪೆವಿಲಿಯನ್‌ಗೆ ಕಳುಹಿಸಿದರು. ಆ ಬಳಿಕ ಲಂಕಾ ಬ್ಯಾಟರ್‌ಗಳ ಪೆವಿಲಿಯನ್‌ ಪರೇಡ್‌ ನಡೆಯಿತು. ಆರಂಭಿಕ ಬ್ಯಾಟರ್‌ಗಳು ಮತ್ತು ಮಧ್ಯಮ ಕ್ರಮಾಂಕದಲ್ಲಿ ಚರಿತ ಅಸಲಂಕ (25) ಹೊರತುಪಡಿಸಿ ಇತರ ಯಾರೂ ಎರಡಂಕಿಯ ಮೊತ್ತ ಗಳಿಸಲಿಲ್ಲ. ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ 43.3 ಓವರ್‌ಗಳಲ್ಲಿ 209 (ಪಥುಮ್‌ ನಿಸಾಂಕ 61, ಕುಶಾಲ್‌ ಪೆರೆರಾ 78, ಚರಿತ ಅಸಲಂಕ 25, ಮಿಚೆಲ್ ಸ್ಟಾರ್ಕ್‌ 43ಕ್ಕೆ 2, ಪ್ಯಾಟ್‌ ಕಮಿನ್ಸ್‌ 32ಕ್ಕೆ 2, ಆ್ಯಡಮ್‌ ಜಂಪಾ 47ಕ್ಕೆ 4) ಆಸ್ಟ್ರೇಲಿಯಾ 35.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 215 (ಮಿಚೆಲ್‌ ಮಾರ್ಸ್‌ 52, ಮಾರ್ನಸ್‌ ಲಾಬುಶೇನ್ 40, ಜೋಶ್‌ ಇಂಗ್ಲಿಸ್‌ 58, ಗ್ಲೆನ್‌ ಮ್ಯಾಕ್ಸ್‌ವೆಲ್‌ ಔಟಾಗದೆ 31, ಮಾರ್ಕಸ್‌ ಸ್ಟೊಯಿನಿಸ್‌ ಔಟಾಗದೆ 20, ದಿಲ್ಶಾನ್ ಮಧುಶಂಕಾ 38ಕ್ಕೆ 3) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 5 ವಿಕೆಟ್‌ ಗೆಲುವು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.