ವಿಶ್ವಕಪ್‌ನಲ್ಲಿ ಲಂಕಾಗೆ ಹೆಚ್ಚು ಸೋಲು; ಪಟ್ಟಿಯಲ್ಲಿರುವ ಉಳಿದ ತಂಡಗಳು ಯಾವುವು? ಲಖನೌ: ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಸತತ ಮೂರನೇ ಸೋಲು ಅನುಭವಿಸಿರುವ ಶ್ರೀಲಂಕಾ ಬಳಗ, ವಿಶ್ವಕಪ್‌ ಇತಿಹಾಸದಲ್ಲಿ ಅತಿ ಹೆಚ್ಚು ಸೋಲು ಕಂಡ ತಂಡ ಎಂಬ ಅಪಖ್ಯಾತಿಗೆ ಒಳಗಾಯಿತು. ಲಖನೌನ ಏಕನಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ 43.3 ಓವರ್‌ಗಳಲ್ಲಿ 209 ರನ್‌ಗಳಿಗೆ ಆಲೌಟಾಯಿತು. ಆಸ್ಟ್ರೇಲಿಯಾ ತಂಡ 35.2 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಉಭಯ ತಂಡಗಳು ಈ ಟೂರ್ನಿಯಲ್ಲಿ ತಲಾ ಮೂರು ಪಂದ್ಯಗಳಲ್ಲಿ ಆಡಿವೆ. ಆಸ್ಟ್ರೇಲಿಯಾ ಒಂದು ಪಂದ್ಯದಲ್ಲಿ ಜಯ ಸಾಧಿಸಿದ್ದರೆ, ಶ್ರೀಲಂಕಾ ಮೂರರಲ್ಲೂ ಮುಗ್ಗರಿಸಿದೆ. ಶ್ರೀಲಂಕಾಗೆ 42ನೇ ಸೋಲು ವಿಶ್ವಕಪ್‌ ಟೂರ್ನಿಗಳಲ್ಲಿ ಇದುವರೆಗೆ 83 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಶ್ರಿಲಂಕಾ, 38ರಲ್ಲಿ ಜಯ ಹಾಗೂ 42ರಲ್ಲಿ ಸೋಲು ಕಂಡಿದೆ. ಆ ಮೂಲಕ ಹೆಚ್ಚು ಸೋಲು ಅನುಭವಿಸಿದ ತಂಡಗಳ ಪಟ್ಟಿಯಲ್ಲಿ ಜಿಂಬಾಬ್ವೆಯೊಂದಿಗೆ ಸ್ಥಾನ ಹಂಚಿಕೊಂಡಿದೆ. ಮೊದಲೆರಡು ವಿಶ್ವಕಪ್‌ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿದ್ದ ವೆಸ್ಟ್‌ ಇಂಡೀಸ್‌ ಹಾಗೂ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಈ ಪಟ್ಟಿಯಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಅಂದಹಾಗೆ ವೆಸ್ಟ್‌ ಇಂಡೀಸ್‌ ಹಾಗೂ ಜಿಂಬಾಬ್ವೆ ತಂಡಗಳು ಈ ಬಾರಿ ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಗೆ ಅರ್ಹತೆ ಪಡೆಯಲು ವಿಫಲವಾಗಿವೆ. ವಿಶ್ವಕಪ್‌ನಲ್ಲಿ ಹೆಚ್ಚು ಸೋಲು ಕಂಡ ತಂಡಗಳು 1. ಶ್ರೀಲಂಕಾ: 83 ಪಂದ್ಯಗಳಲ್ಲಿ 42 ಸೋಲು 2. ಜಿಂಬಾಬ್ವೆ: 57 ಪಂದ್ಯಗಳಲ್ಲಿ 42 ಸೋಲು 3. ವೆಸ್ಟ್‌ ಇಂಡೀಸ್‌: 80 ಪಂದ್ಯಗಳಲ್ಲಿ 35 ಸೋಲು 4. ಇಂಗ್ಲೆಂಡ್‌: 86 ಪಂದ್ಯಗಳಲ್ಲಿ 34 ಸೋಲು 5. ಪಾಕಿಸ್ತಾನ: 86 ಪಂದ್ಯಗಳಲ್ಲಿ 33 ಸೋಲು 6. ನ್ಯೂಜಿಲೆಂಡ್‌: 92 ಪಂದ್ಯಗಳಲ್ಲಿ 33 ಸೋಲು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.