ಭಾರತ ವಿರುದ್ಧದ ಪಂದ್ಯಕ್ಕೆ ಪಾಕ್ ಬೆಂಬಲಿಗರ ಸುಳಿವೇ ಇಲ್ಲ: ಮಿಕಿ ಅಸಮಾಧಾನ ಅಹಮದಾಬಾದ್: ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದ ಸಂದರ್ಭದಲ್ಲಿ ಪಾಕಿಸ್ತಾನದ ಬೆಂಬಲಿಗರೇ ಇರಲಿಲ್ಲ. ಕೇವಲ ಭಾರತೀಯ ಅಭಿಮಾನಿಗಳು ತುಂಬಿದ್ದರು. ಅದರಿಂದಾಗಿ ಈ ಪಂದ್ಯವು ಐಸಿಸಿ ಆಯೋಜಿತವೆನಿಸದೇ, ಬಿಸಿಸಿಐ ಕಾರ್ಯಕ್ರಮದಂತೆ ಭಾಸವಾಯಿತು ಎಂದು ಪಾಕಿಸ್ತಾನ ತಂಡದ ನಿರ್ದೇಶಕ ಮಿಕಿ ಆರ್ಥರ್ ವ್ಯಂಗ್ಯವಾಡಿದ್ದಾರೆ. ಶನಿವಾರ ರಾತ್ರಿ ಇಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತದ ಎದುರು ಹೀನಾಯ ಸೋಲನುಭವಿಸಿತು. ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಸೇರಿದ್ದರು. ಬೃಹತ್ ಜನಸಮುದಾಯದ ಮುಂದೆ ಆಡುವ ಒತ್ತಡವೂ ತಮ್ಮ ತಂಡದ ಸೋಲಿನ ಕಾರಣಗಳಲ್ಲಿ ಒಂದು ಎಂದೂ ಮಿಕಿ ಹೇಳಿದ್ದಾರೆ. ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಿಕಿ, ‘ತಮ್ಮ ದೇಶದ ಅಭಿಮಾನಿಗಳ ಗೈರು ಹಾಜರಿಯು ತಂಡದ ಆಟದ ಮೇಲೆ ಪರಿಣಾಮ ಬೀರಿಲ್ಲ ಎಂದು ನಾನು ಹೇಳಲು ಸಾಧ್ಯವಿಲ್ಲ. ಯಾವುದೆ ಮೂಲೆಯಿಂದಲೂ ದಿಲ್ ದಿಲ್ ಪಾಕಿಸ್ತಾನ ಎಂಬ ಘೋಷಣೆ ಕೇಳಿಸಲೇ ಇಲ್ಲ. ಕ್ರೀಡಾಂಗಣದಲ್ಲಿರುವ ವಾತಾವರಣವೂ ಆಟಗಾರರ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ‘ ಎಂದರು. ‘ದಿಲ್ ದಿಲ್ ಪಾಕಿಸ್ತಾನ‘ ಎಂಬುದು ಪಾಕ್ ತಂಡದ ಬೆಂಬಲಕ್ಕೆ ಜುನೇದ್ ಜಮ್ಷೆದ್ ಅವರು ಹಾಡಿರುವ ಗೀತೆಯಾಗಿದೆ. ‘ನಮ್ಮ ತಂಡದ ಒಟ್ಟಾರೆ ಪ್ರದರ್ಶನವು ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. 155ಕ್ಕೆ ಮೂರು ವಿಕೆಟ್‌ಗಳು ಪತನವಾಗಿದ್ದವು. ಈ ಹಂತದಿಂದ 191 ರನ್‌ ಮೊತ್ತ ಮುಟ್ಟುವಷ್ಟರಲ್ಲಿ ತಂಡ ಆಲೌಟ್ ಅಯಿತು. ಬಾಬರ್ ಮತ್ತು ರಿಜ್ವಾನ್ ಜೊತೆಯಾಟದ ಮೇಲೆ ಉಳಿದವರು ಉತ್ತಮ ಮೊತ್ತ ಪೇರಿಸಲು ಅವಕಾಶ ಇತ್ತು. ಆದರೆ, ಭಾರತದ ಬೌಲರ್‌ಗಳ ಆಟ ಉತ್ಕೃಷ್ಟವಾಗಿತ್ತು‘ ಎಂದರು. ‘ಭಾರತ ತಂಡದ ಎದುರು ಪಾಕಿಸ್ತಾನದ ಈ ಸೋಲು ಕಳಂಕವಾಗಿದೆ. ಪಾಕ್ ಆಟಗಾರರ ನೀರಸವಾದ ಆಟವನ್ನು ಒಪ್ಪಲಾಗದು’ ಎಂದು ಪಾಕ್ ತಂಡದ ಮಾಜಿ ಕ್ರಿಕೆಟಿಗ ರಮೀಜ್ ರಾಝಾ ಟೀಕಿಸಿದ್ದಾರೆ. ‘ಮೂರು ವಿಭಾಗಗಳಲ್ಲಿಯೂ ಕೆಟ್ಟದಾಗಿ ಆಡಿದರು. ಇದು ಬಹುಕಾಲ ನೋವು ಕೊಡುವ ಸಂಗತಿಯಾಗಿದೆ. ನಿಮಗೆ ಗೆಲ್ಲಲು ಸಾಧ್ಯವಿಲ್ಲವೇ ಪರವಾಗಿಲ್ಲ. ಆದರೆ ಕನಿಷ್ಠ ಕಠಿಣ ಪೈಪೋಟಿಯನ್ನಾದರೂ ನೀಡಬೇಕು‘ ಎಂದು ರಮೀಜ್ ತಂಡವನ್ನು ತರಾಟಗೆ ತೆಗೆದುಕೊಂಡಿದ್ದಾರೆ. ‘ಭಾರತದ ಎದುರಿನ ಪಂದ್ಯವು ಪಾಕಿಸ್ತಾನಕ್ಕೆ ಯಾವಾಗಲೂ ಒತ್ತಡ ಮೂಡಿಸುವುದು ಸಹಜ. ಆದರಲ್ಲೂ ಈ ಬಾರಿ ಪಂದ್ಯ ನಡೆದ ಕ್ರೀಡಾಂಗಣದಲ್ಲಿ ಸೇರಿದ್ದ ಅಪಾರ ಜನಸ್ತೋಮದಲ್ಲಿ ಶೇ 99ರಷ್ಟು ಭಾರತೀಯ ಅಭಿಮಾನಿಗಳೇ ಇದ್ದರು. ಇದು ಕೂಡ ಒತ್ತಡ ಹೆಚ್ಚಿಸಿರಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.