| ರಹೀಂ ಅರ್ಧಶತಕ; ನ್ಯೂಜಿಲೆಂಡ್‌ಗೆ 246 ರನ್ ಗುರಿ ನೀಡಿದ ಬಾಂಗ್ಲಾದೇಶ ಚೆನ್ನೈ: ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿರುವ ನ್ಯೂಜಿಲೆಂಡ್‌ಗೆ ಬಾಂಗ್ಲಾದೇಶ ತಂಡ 246 ರನ್ ಗುರಿ ನೀಡಿದೆ. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, ಮುಷ್ಫಿಕರ್‌ ರಹೀಂ ಗಳಿಸಿದ ಅರ್ಧಶತಕದ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 245 ರನ್ ಕಲೆಹಾಕಿದೆ. ಬಾಂಗ್ಲಾ ಪಡೆಗೆ ಉತ್ತಮ ಆರಂಭ ಸಿಗಲಿಲ್ಲ. ಕೇವಲ 56 ರನ್‌ ಗಳಿಸುವಷ್ಟರಲ್ಲೇ ಅಗ್ರ ಕ್ರಮಾಂಕದ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಯಾದ ನಾಯಕ ಶಕೀಬ್‌ ಅಲ್‌ ಹಸನ್‌ ಮತ್ತು ರಹೀಂ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದರು. ಈ ಜೋಡಿ 5ನೇ ವಿಕೆಟ್‌ಗೆ 96 ರನ್ ಕಲೆಹಾಕಿತು. 75 ಎಸೆತಗಳನ್ನು ಎದುರಿಸಿದ ರಹೀಂ 66 ರನ್‌ ಗಳಿಸಿ ಔಟಾದರು. ಇದು ಅವರು ಏಕದಿನ ಮಾದರಿಯಲ್ಲಿ ಗಳಿಸಿದ 48ನೇ ಅರ್ಧಶತಕ. ರಹೀಂಗೆ ಸಾಥ್‌ ನೀಡಿದ ಶಕೀಬ್‌ 40 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಕೊನೆಯಲ್ಲಿ ಮೊಹಮುದುಲ್ಲಾ 41 ರನ್‌ಗಳ ಕೊಡುಗೆ ನೀಡಿದರು. ಹೀಗಾಗಿ, ಬಾಂಗ್ಲಾ ಪಡೆ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಸಾಧ್ಯವಾಯಿತು. ನ್ಯೂಜಿಲೆಂಡ್‌ ಪರ ಲಾಕಿ ಫರ್ಗ್ಯೂಸನ್‌ ಮೂರು ವಿಕೆಟ್ ಪಡೆದರು. ಟ್ರೆಂಟ್‌ ಬೌಲ್ಟ್‌, ಮ್ಯಾಟ್‌ ಹೆನ್ರಿ ತಲಾ ಎರಡು ಮತ್ತು ಮಿಚೇಲ್‌ ಸ್ಯಾಂಟ್ನರ್‌, ಗ್ಲೇನ್‌ ಫಿಲಿಪ್ಸ್‌ ತಲಾ ಒಂದೊಂದು ವಿಕೆಟ್‌ ಕಿತ್ತರು. ಕೇನ್ ವಾಪಸ್ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ವಾಪಸ್‌ ಆಗಿದ್ದು, ಈ ಪಂದ್ಯದಲ್ಲಿ ತಂಡ ಮುನ್ನಡೆಸುತ್ತಿದ್ದಾರೆ. ಟಾಮ್‌ ಲಥಾಂ ನಾಯಕತ್ವದಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಕಿವೀಸ್‌ ಬಳಗ, ಪಾಯಿಂಟ್‌ ಪಟ್ಟಿಯಲ್ಲಿ ಸದ್ಯ ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾ ತಂಡ ಆಡಿರುವ ಎರಡು ಪಂದ್ಯಗಳಲ್ಲಿ ತಲಾ ಒಂದೊಂದು ಜಯ ಮತ್ತು ಸೋಲು ಕಂಡಿದ್ದು, ಆರನೇ ಸ್ಥಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.