ಪಾಕ್‌ ಆಟಗಾರರಿಗೆ ಭವ್ಯ ಸ್ವಾಗತ ಅಹಮದಾಬಾದ್‌ (ಪಿಟಿಐ): ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ವಿಶ್ವಕ‍ಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಅ.14ರಂದು ಮುಖಾಮುಖಿಯಾಗಲಿದ್ದು, ಈ ನಿಟ್ಟಿನಲ್ಲಿ ಪಾಕ್‌ ತಂಡದ ಆಟಗಾರರು ಗುರುವಾರ ಅಹಮದಾಬಾದ್‌ಗೆ ಬಿಗಿಭದ್ರತೆಯಲ್ಲಿ ಬಂದರು. ಹೋಟೆಲ್‌ಗೆ ಬಂದ ಪಾಕ್‌ ಆಟಗಾರರಿಗೆ ಭಾರತೀಯ ಸಂಪ್ರದಾಯದಂತೆ ಭವ್ಯ ಸ್ವಾಗತ ಕೋರಲಾಯಿತು. ಹೂವಿನ ದಳಗಳ ಮತ್ತು ಬಲೂನ್‌ಗಳ ಸುರಿಮಳೆ, ಸಾಂಪ್ರದಾಯಿಕ ಶಿರೋವಸ್ತ್ರ, ನೃತ್ಯ ಪ್ರದರ್ಶನದೊಂದಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಅಲ್ಲದೆ, ಹೈದರಾಬಾದ್‌ನಿಂದ ಅಹಮದಾಬಾದ್‌ಗೆ ಪ್ರಯಾಣಿಸುವ ವೇಳೆ ಪಾಕ್‌ ಆಟಗಾರರಿಗೆ ವಿಮಾನ ಸಿಬ್ಬಂದಿ ಕೇಕ್‌ ಕತ್ತರಿಸುವ ಸಮಾರಂಭ ಆಯೋಜಿಸಿದ್ದರು. ತನ್ನ ಆಟಗಾರರು ಭಾರತದಲ್ಲಿ ಸ್ವೀಕರಿಸಿದ ಭವ್ಯ ಸ್ವಾಗತದ ವಿಡಿಯೊವನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಸೆರೆಹಿಡಿದು ‘ಎಕ್ಸ್‌’ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದೆ. ಶನಿವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಹೈವೋಲ್ಟೇಜ್‌ ಪಂದ್ಯಕ್ಕೆ ಬಿಗಿಭದ್ರತೆ ಏರ್ಪಡಿಸಲಾಗಿದೆ. ಗುಜರಾತ್‌ ಪೊಲೀಸ್‌, ರಾಷ್ಟ್ರೀಯ ಭದ್ರತಾ ಪಡೆ, ಕ್ಷೀಪ್ರ ಕಾರ್ಯಾಚರಣೆ ಪಡೆ ಮತ್ತು ಹೋಮ್‌ಗಾರ್ಡ್‌ ಸೇರಿದಂತೆ 11 ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಉಭಯ ತಂಡಗಳು ಟೂರ್ನಿಯಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿವೆ. ಬಾಬರ್‌ ಪಡೆಯು ನೆದರ್ಲೆಂಡ್ಸ್‌ ಮತ್ತು ಶ್ರೀಲಂಕಾವನ್ನು ಮಣಿಸಿದ್ದರೆ, ರೋಹಿತ್‌ ಶರ್ಮಾ ಬಳಗ ಆಸ್ಟ್ರೇಲಿಯಾ ಮತ್ತು ಅಫ್ಗಾನಿಸ್ತಾನವನ್ನು ಮಣಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.