| ಮತ್ತೆ ಮುಗ್ಗರಿಸಿದ ಆಸ್ಟ್ರೇಲಿಯಾ; ಅಗ್ರಸ್ಥಾನಕ್ಕೇರಿದ ದ.ಆಫ್ರಿಕಾ ಲಖನೌ: ಆರಂಭಿಕ ಬ್ಯಾಟರ್‌ ಕ್ವಿಂಟನ್‌ ಡಿ ಕಾಕ್‌ ಅವರ ಸತತ ಎರಡನೇ ಶತಕ ಮತ್ತು ಬೌಲರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿತು. ಏಕನಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ತೆಂಬಾ ಬವುಮಾ ಬಳಗ 134 ರನ್‌ಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿತು. ಮೊದಲ ಪಂದ್ಯದಲ್ಲಿ ಭಾರತಕ್ಕೆ ಶರಣಾಗಿದ್ದ, ಪ್ಯಾಟ್‌ ಕಮಿನ್ಸ್ ಬಳಗಕ್ಕೆ ಎದುರಾದ ಎರಡನೇ ಸೋಲು ಇದು. ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 311 ರನ್‌ ಪೇರಿಸಿತು. ಡಿ ಕಾಕ್‌ (109; 106 ಎ., 4X8, 6X5) ಮತ್ತು ಏಡನ್‌ ಮರ್ಕರಂ (56; 44 ಎ., 4X7,. 6X1) ಅವರು ಗಮನ ಸೆಳೆದರು. ಆಸ್ಟ್ರೇಲಿಯಾ ಫೀಲ್ಡರ್‌ಗಳು ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಕೂಡಾ ದಕ್ಷಿಣ ಆಫ್ರಿಕಾ ತಂಡದ ಮೊತ್ತ ಬೆಳೆಯಲು ಕಾರಣ. ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ 40.5 ಓವರ್‌ಗಳಲ್ಲಿ 177 ರನ್‌ಗಳಿಗೆ ಮುಗ್ಗರಿಸಿತು. 33 ರನ್‌ಗಳಿಗೆ ಮೂರು ವಿಕೆಟ್‌ ಪಡೆದ ದಕ್ಷಿಣ ಆಫ್ರಿಕಾ ತಂಡದ ವೇಗಿ ಕಗಿಸೊ ರಬಾಡ ಯಶಸ್ವಿ ಬೌಲರ್‌ ಎನಿಸಿಕೊಂಡರೆ, ಅವರಿಗೆ ತಕ್ಕ ಸಾಥ್‌ ನೀಡಿದ ಸ್ಪಿನ್ನರ್‌ಗಳಾದ ಕೇಶವ್‌ ಮಹಾರಾಜ್‌ ಮತ್ತು ತಬ್ರೇಜ್‌ ಶಂಸಿ ತಲಾ ಎರಡು ವಿಕೆಟ್‌ ಪಡೆದರು. ಆರಂಭದಿಂದಲೇ ವಿಕೆಟ್‌ಗಳನ್ನು ಕಳೆದುಕೊಂಡ ಆಸ್ಟ್ರೇಲಿಯಾ ತಂಡ ಯಾವ ಹಂತದಲ್ಲೂ ಹೋರಾಟದ ಮನೋಭಾವ ತೋರಲಿಲ್ಲ. ತಂಡದ ಮೊತ್ತ 27 ಆದಾಗ ಮಿಚೆಲ್‌ ಮಾರ್ಷ್‌ (7) ಮರಳಿದರು. ಅವರು ಮಾರ್ಕೊ ಜೆನ್ಸೆನ್‌ ಎಸೆತದಲ್ಲಿ ಬವುಮಾಗೆ ಕ್ಯಾಚಿತ್ತರು. ಡೇವಿಡ್‌ ವಾರ್ನರ್‌ (13; 27 ಎ.) ಅವರ ಪರದಾಟಕ್ಕೆ ಲುಂಗಿ ಗಿಡಿ ತೆರೆ ಎಳೆದರು. ನಾಲ್ಕು ಬೌಂಡರಿಗಳ ಮೂಲಕ ಉತ್ತಮ ಆರಂಭ ಪಡೆದ ಸ್ಟೀವನ್‌ ಸ್ಮಿತ್‌ (19; 16 ಎ.) ಅವರನ್ನು ರಬಾಡ, ಎಲ್‌ಬಿಡಬ್ಲ್ಯು ಬಲೆಯಲ್ಲಿ ಕೆಡವಿದರು. ಜೋಶ್‌ ಇಂಗ್ಲಿಸ್‌ (5) ಮತ್ತು ಮಾರ್ನಸ್‌ ಸ್ಟೊಯಿನಿಸ್ (5) ಅವರನ್ನೂ ರಬಾಡ ಪೆವಿಲಿಯನ್‌ಗಟ್ಟಿದರು. ಇದರ ನಡುವೆ ಅಪಾಯಕಾರಿ ಬ್ಯಾಟರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ (3) ಅವರನ್ನು ಕೇಶವ್‌ ಮಹಾರಾಜ್‌ ತಮ್ಮದೇ ಬೌಲಿಂಗ್‌ನಲ್ಲಿ ಕ್ಯಾಚ್‌ ಹಿಡಿದು ಔಟ್‌ ಮಾಡಿದರು. 70 ರನ್‌ ಗಳಿಸುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡಾಗ ಆಸ್ಟ್ರೇಲಿಯಾ ತಂಡ ಗೆಲುವಿನ ಆಸೆ ಕೈಬಿಟ್ಟಿತು. ಮಾರ್ನಸ್‌ ಲಾಬುಶೇನ್‌ (46; 74 ಎ.) ಮತ್ತು ಮಿಚೆಲ್‌ ಸ್ಟಾರ್ಕ್‌ (27) ಅವರು ಸೋಲಿನ ಅಂತರ ತಗ್ಗಿಸಿದರು. ಡಿಕಾಕ್‌ ಮಿಂಚು: ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಫೀಲ್ಡಿಂಗ್‌ ಮಾಡಲು ತೀರ್ಮಾನಿಸಿದರು. ಆದರೆ ಅವರ ನಿರ್ಧಾರವನ್ನು ದಕ್ಷಿಣ ಆಫ್ರಿಕಾ ಆರಂಭಿಕ ಬ್ಯಾಟರ್‌ಗಳು ತಲೆಕೆಳಗಾಗಿಸಿದರು. ಡಿಕಾಕ್‌ ಮತ್ತು ಬವುಮಾ (35; 55 ಎ.) ಮೊದಲ ವಿಕೆಟ್‌ಗೆ 19.4 ಓವರ್‌ಗಳಲ್ಲಿ 108 ರನ್‌ ಸೇರಿಸಿದರು. ರನ್‌ ವೇಗ ಹೆಚ್ಚಿಸುವ ಪ್ರಯತ್ನದಲ್ಲಿ ಬವುಮಾ, ಮ್ಯಾಕ್ಸ್‌ವೆಲ್‌ ಎಸೆತದಲ್ಲಿ ವಾರ್ನರ್‌ಗೆ ಕ್ಯಾಚಿತ್ತು ಔಟಾದರು. ಡಿ ಕಾಕ್‌ ಆ ಬಳಿಕ ರಸೀ ವ್ಯಾನ್ ಡೆರ್‌ ಡಸೆ (26) ಅವರೊಂದಿಗೆ ಎರಡನೇ ವಿಕೆಟ್‌ಗೆ 50 ರನ್‌ ಕಲೆಹಾಕಿದರು. ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಶತಕ ಗಳಿಸಿದ್ದ 30 ವರ್ಷದ ವಿಕೆಟ್‌ ಕೀಪರ್‌ ಬ್ಯಾಟರ್‌ ಡಿಕಾಕ್‌, ಆಸ್ಟ್ರೇಲಿಯಾದ ಸ್ಪಿನ್‌ ಮತ್ತು ವೇಗದ ದಾಳಿಗ ಎದೆಯೊಡ್ಡಿ ನಿಂತರು. ಐಪಿಎಲ್‌ನಲ್ಲಿ ಲಖನೌ ಜೈಂಟ್ಸ್ ಪರ ಏಕನಾ ಕ್ರೀಡಾಂಗಣದಲ್ಲಿ ಹಲವು ಪಂದ್ಯಗಳನ್ನು ಆಡಿದ್ದರಿಂದ ಡಿ ಕಾಕ್‌ ಇಲ್ಲಿನ ಪರಿಸ್ಥಿತಿಗೆ ಬೇಗನೇ ಹೊಂದಿಕೊಂಡರು. 35ನೇ ಓವರ್‌ನಲ್ಲಿ ಅವರು ಔಟಾದ ಬಳಿಕ ಆಸ್ಟ್ರೇಲಿಯಾ ತಂಡಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸುವ ಅವಕಾಶವಿತ್ತು. ಆದರೆ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಮುಳುವಾಗಿ ಪರಿಣಮಿಸಿತು. 1 ರನ್‌ ಗಳಿಸಿದ್ದಾಗ ಜೀವದಾನ ಪಡೆದ ಮರ್ಕರಂ, ಅರ್ಧಶತಕದ ಮೂಲಕ ಎದುರಾಳಿ ತಂಡವನ್ನು ಕಾಡಿದರು. ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 311 (ಕ್ವಿಂಟನ್‌ ಡಿ ಕಾಕ್ 109, ತೆಂಬಾ ಬವುಮಾ 35, ರಸೀ ವ್ಯಾನ್ ಡೆರ್‌ ಡಸೆ 26, ಏಡನ್‌ ಮರ್ಕರಂ 56, ಹೆನ್ರಿಕ್ ಕ್ಲಾಸೆನ್‌ 29, ಮಾರ್ಕೊ ಜೆನ್ಸೆನ್‌ 26, ಗ್ಲೆನ್‌ ಮ್ಯಾಕ್ಸ್‌ವೆಲ್‌ 34ಕ್ಕೆ 2, ಮಿಚೆಲ್‌ ಸ್ಟಾರ್ಕ್‌ 53ಕ್ಕೆ 2, ಜೋಶ್‌ ಹ್ಯಾಜೆಲ್‌ವುಡ್‌ 60ಕ್ಕೆ 1) ಆಸ್ಟ್ರೇಲಿಯಾ 40.5 ಓವರ್‌ಗಳಲ್ಲಿ 177 (ಸ್ಟೀವನ್‌ ಸ್ಮಿತ್‌ 19, ಮಾರ್ನಸ್‌ ಲಾಬುಶೇನ್ 46, ಮಿಚೆಲ್‌ ಸ್ಟಾರ್ಕ್‌ 27, ಪ್ಯಾಟ್‌ ಕಮಿನ್ಸ್ 22, ಕಗಿಸೊ ರಬಾಡ 33ಕ್ಕೆ 3, ಕೇಶವ್‌ ಮಹಾರಾಜ್ 30ಕ್ಕೆ 2, ತಬ್ರೇಜ್‌ ಶಂಸಿ 38ಕ್ಕೆ 2, ಮಾರ್ಕೊ ಜೆನ್ಸೆನ್‌ 54ಕ್ಕೆ 2) ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 134 ರನ್‌ ಗೆಲುವು #CWC23 @ # ⚡# ../EJicL7lRQ7 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.