2023: ರೋಹಿತ್ ಶರ್ಮಾ ಬೌಲಿಂಗ್ ಅಭ್ಯಾಸ; ಅಭಿಮಾನಿಗಳಲ್ಲಿ ಕುತೂಹಲ! ಪುಣೆ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದರಿಂದಾಗಿ ಪ್ರಸಕ್ತ ಸಾಗುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಫ್ ಸ್ಪಿನ್ ದಾಳಿ ಮಾಡುವರೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ಅಕ್ಟೋಬರ್ 19ರಂದು ಪುಣೆಯಲ್ಲಿ ಬಾಂಗ್ಲಾದೇಶದ ಸವಾಲನ್ನು ಎದುರಿಸಲಿದೆ. ಈ ಮಧ್ಯೆ ರೋಹಿತ್ ಅವರು ನೆಟ್ಸ್‌ನಲ್ಲಿ ಆಫ್ ಸ್ಪಿನ್ ಬೌಲಿಂಗ್ ಅಭ್ಯಾಸ ಮಾಡಿದ್ದಾರೆ. ಟೀಮ್ ಇಂಡಿಯಾದಲ್ಲಿ ಅರೆಕಾಲಿಕ ಬೌಲರ್‌ಗಳ ಕೊರತೆ ಎದ್ದು ಕಾಣಿಸುತ್ತಿದೆ. ಬ್ಯಾಟರ್‌ಗಳು ಬೌಲಿಂಗ್ ಮಾಡದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಅರೆಕಾಲಿಕ ಬೌಲರ್‌ಗಳು ಒಂದೆರಡು ಓವರ್ ಬೌಲಿಂಗ್ ಮಾಡುವ ಮೂಲಕ ಪಂದ್ಯಕ್ಕೆ ನಿರ್ಣಾಯಕ ತಿರುವು ನೀಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. (@) ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಬೌಲಿಂಗ್ ಮೂಲಕವೂ ಗಮನ ಸೆಳೆದಿದ್ದ ರೋಹಿತ್ ಈಗ ವಿಶ್ವಕಪ್‌ನಲ್ಲಿ ಬೌಲಿಂಗ್ ಮಾಡುವರೇ ಎಂಬುದನ್ನು ಕಾದು ನೋಡಬೇಕಿದೆ. ಅಭಿಮಾನಿಗಳಂತೂ ಬ್ಯಾಟಿಂಗ್ ರೀತಿಯೇ ಬೌಲಿಂಗ್‌ನಲ್ಲೂ ಮೋಡಿ ಮಾಡಲಿ ಎಂದು ಹಾರೈಸಿದ್ದಾರೆ. ನಿಮಗಿದು ಗೊತ್ತೇ? ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಎಂಟು, ಟೆಸ್ಟ್‌ನಲ್ಲಿ 2 ಮತ್ತು ಟ್ವೆಂಟಿ-20ನಲ್ಲಿ ಒಂದು ವಿಕೆಟ್ ಗಳಿಸಿದ್ದಾರೆ. ಇನ್ನು ಐಪಿಎಲ್‌ನಲ್ಲಿ 'ಹ್ಯಾಟ್ರಿಕ್' ಸಹಿತ 15 ವಿಕೆಟ್ ಗಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.