2023: ರನ್ ಬೇಟೆಯಲ್ಲಿ ಅಗ್ರಸ್ಥಾನಕ್ಕೇರಿದ ಹಿಟ್‌ಮ್ಯಾನ್ ಪುಣೆ: ಐಸಿಸಿ ಏಕದಿನ ವಿಶ್ವಕಪ್ 2023 ಕ್ರಿಕೆಟ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಗ್ರಸ್ಥಾನಕ್ಕೇರಿದ್ದಾರೆ. ಬಾಂಗ್ಲಾದೇಶ ವಿರುದ್ಧ ಪುಣೆಯಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ 48 ರನ್ ಗಳಿಸಿದ ರೋಹಿತ್, ನ್ಯೂಜಿಲೆಂಡ್‌ನ ಡೆವೊನ್ ಕಾನ್ವೆ ಅವರನ್ನು ಹಿಂದಿಕ್ಕಿದ್ದಾರೆ. ರೋಹಿತ್ ಈವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ 66.25ರ ಸರಾಸರಿಯಲ್ಲಿ 265 ರನ್ ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಕಾನ್ವೆ, ಅಷ್ಟೇ ಪಂದ್ಯಗಳಲ್ಲಿ 249 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿದ್ದ ರೋಹಿತ್ ಬಳಿಕ ಹಿಂತಿರುಗಿ ನೋಡಿಲ್ಲ. ಅಫ್ಗಾನಿಸ್ತಾನ ವಿರುದ್ಧ ಭರ್ಜರಿ ಶತಕ (131) ಗಳಿಸಿದ್ದ ರೋಹಿತ್, ಪಾಕಿಸ್ತಾನ (86) ವಿರುದ್ಧವೂ ಅಬ್ಬರಿಸಿದ್ದರು. ಈಗ ಬಾಂಗ್ಲಾದೇಶ ವಿರುದ್ಧವೂ 48 ರನ್‌ಗಳ ಅಮೂಲ್ಯ ಇನಿಂಗ್ಸ್ ಕಟ್ಟಿದ್ದಾರೆ. 40 ಎಸೆತಗಳನ್ನು ಎದುರಿಸಿದ ರೋಹಿತ್ ಇನಿಂಗ್ಸ್‌ನಲ್ಲಿ ಏಳು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿತ್ತು. ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿರುವ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಹಾಗೂ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ಅವರಿಂದಲೂ ರೋಹಿತ್‌ಗೆ ಪ್ರಬಲ ಪೈಪೋಟಿ ಎದುರಾಗಿದೆ. ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಗರಿಷ್ಠ ರನ್ ಸರದಾರರು: 1. ರೋಹಿತ್ ಶರ್ಮಾ: 265 (4 ಪಂದ್ಯ) 2. ಡೆವೊನ್ ಕಾನ್ವೆ: 249 (4 ಪಂದ್ಯ) 3. ಮೊಹಮ್ಮದ್ ರಿಜ್ವಾನ್: 248 (3 ಪಂದ್ಯ) 4. ಕ್ವಿಂಟನ್ ಡಿಕಾಕ್: 229 (3 ಪಂದ್ಯ) 5. ರಚಿನ್ ರವೀಂದ್ರ: 215 (4 ಪಂದ್ಯ) ರೋಹಿತ್ ಶರ್ಮಾ (ರಾಯಿಟರ್ಸ್ ಚಿತ್ರ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.