ವಿಶ್ವಕಪ್‌: ಪಾಕ್‌ಗೆ ಅಫ್ಗನ್‌ ಸ್ಪಿನ್‌ ಭಯ ಚೆನ್ನೈ (ಪಿಟಿಐ): ಗೆಲುವಿನ ಹಾದಿಗೆ ಮರಳುವ ಪ್ರಯತ್ನದಲ್ಲಿರುವ ಪಾಕಿಸ್ತಾನ ತಂಡ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಸೋಮವಾರ, ಅಫ್ಗಾನಿಸ್ತಾನದ ಸವಾಲು ಎದುರಿಸಲಿದೆ. ಚೆನ್ನೈನ ಚೆಪಾಕ್‌ ಕ್ರೀಡಾಂಗಣದ ಪಿಚ್‌, ಸ್ಪಿನ್ನರ್‌ಗಳಿಗೆ ನೆರವು ನೀಡುವುದರಿಂದ ಅಫ್ಗನ್‌ ತಂಡದ ಸ್ಪಿನ್ನರ್‌ಗಳು ಬಾಬರ್‌ ಅಜಂ ಬಳಗಕ್ಕೆ ಭಯ ಉಂಟುಮಾಡಿದ್ದಾರೆ. ಸತತ ಎರಡು ಪಂದ್ಯಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎದುರು ಪರಾಭವಗೊಂಡಿರುವ ಪಾಕಿಸ್ತಾನ ತಂಡಕ್ಕೆ ಸೋಮವಾರ ಗೆಲುವು ಅನಿವಾರ್ಯ. ಇನ್ನೊಂದು ಸೋಲು ಎದುರಾದರೆ ಸೆಮಿಫೈನಲ್‌ ಪ್ರವೇಶದ ಸಾಧ್ಯತೆ ಕ್ಷೀಣಿಸಲಿದೆ. ನಾಲ್ಕು ಪಾಯಿಂಟ್ಸ್‌ ಹೊಂದಿರುವ ಬಾಬರ್‌ ಬಳಗ ಈಗ ಐದನೇ ಸ್ಥಾನದಲ್ಲಿದೆ. ಆದರೆ ರನ್‌ರೇಟ್‌ (–0.456) ಕಡಿಮೆ ಇರುವುದು ಚಿಂತೆಗೆ ಕಾರಣವಾಗಿದೆ. ಸ್ಪಿನ್‌ ದಾಳಿ ಎದುರಿಸುವಲ್ಲಿ ಬ್ಯಾಟರ್‌ಗಳ ದೌರ್ಬಲ್ಯವು ಪಾಕ್‌ ತಂಡಕ್ಕೆ ತಲೆನೋವು ಉಂಟುಮಾಡಿದೆ. ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ತಂಡದ ನಾಲ್ವರು ಪ್ರಮುಖ ಬ್ಯಾಟರ್‌ಗಳು ಆಸ್ಟ್ರೇಲಿಯಾದ ಸ್ಪಿನ್ನರ್‌ ಆ್ಯಡಮ್‌ ಜಂಪಾ ಅವರಿಗೆ ವಿಕೆಟ್‌ ಒಪ್ಪಿಸಿದ್ದರು. ಜಂಪಾ ಅವರ ಎಸೆತಗಳ ಗತಿಯನ್ನು ಅಂದಾಜಿಸುವಲ್ಲಿ ಎಡವಿದ್ದರು. ಅಫ್ಗನ್‌ ತಂಡದ ಪ್ರಮುಖ ಶಕ್ತಿ ಸ್ಪಿನ್ನರ್‌ಗಳೇ ಆಗಿದ್ದಾರೆ. ರಶೀದ್‌ ಖಾನ್, ಮೊಹಮ್ಮದ್ ನಬಿ ಮತ್ತು ಮುಜೀಬ್‌ ಉರ್‌ ರಹಮಾನ್‌ ಅವರು ಇಲ್ಲಿನ ಪಿಚ್‌ನಲ್ಲಿ ಪ್ರಮುಖ ಬ್ಯಾಟರ್‌ಗಳನ್ನು ಕಾಡುವ ಸಾಮರ್ಥ್ಯ ಹೊಂದಿದ್ದಾರೆ. ಆದ್ದರಿಂದ ಪಾಕ್‌ ಬ್ಯಾಟರ್‌ಗಳು ವಿಕೆಟ್‌ ಕಾಯ್ದುಕೊಂಡು ದೊಡ್ಡ ಮೊತ್ತ ಪೇರಿಸಲು ಹೆಚ್ಚಿನ ಶ್ರಮವಹಿಸಬೇಕಿದೆ. ಅದರಲ್ಲೂ ನಾಯಕ ಬಾಬರ್‌ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಅವರಿಂದ ಇನ್ನೂ ದೊಡ್ಡ ಮೊತ್ತ ಮೂಡಿಬಂದಿಲ್ಲ. ಟೂರ್ನಿಯಲ್ಲಿ ಒಟ್ಟು 294 ರನ್‌ ಕಲೆಹಾಕಿರುವ ಮೊಹಮ್ಮದ್‌ ರಿಜ್ವಾನ್‌ ತಮ್ಮ ಉತ್ತಮ ಫಾರ್ಮ್‌ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸೌದ್‌ ಶಕೀಲ್‌ ಮತ್ತು ಇಫ್ತಿಕಾರ್‌ ಅಹಮದ್‌ ಅವರಿಂದ ತಂಡವು ಉತ್ತಮ ಆಟ ನಿರೀಕ್ಷಿಸುತ್ತಿದೆ. ಪಾಕ್‌ ತಂಡದ ಬೌಲರ್‌ಗಳಿಂದಲೂ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಎಡಗೈ ವೇಗಿ ಶಹೀನ್‌ ಶಾ ಆಫ್ರಿದಿ ಅವರು ಆಸ್ಟ್ರೇಲಿಯಾ ವಿರುದ್ಧ ಐದು ವಿಕೆಟ್‌ಗಳೊಂದಿಗೆ ಲಯಕ್ಕೆ ಮರಳಿರುವುದು ತಂಡಕ್ಕೆ ಸಮಾಧಾನ ಉಂಟುಮಾಡಿದೆ. ಆದರೆ ಇತರ ಇಬ್ಬರು ವೇಗಿಗಳಾದ ಹ್ಯಾರಿಸ್‌ ರವೂಫ್‌ ಮತ್ತು ಹಸನ್‌ ಅಲಿ ಅವರ ಕಳಪೆ ಫಾರ್ಮ್‌ ಚಿಂತೆಗೆ ಎಡೆಮಾಡಿಕೊಟ್ಟಿದೆ. ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಮೊಹಮ್ಮದ್‌ ನವಾಜ್‌, ಶಾದಾಬ್‌ ಖಾನ್‌ ಮತ್ತು ಉಸಾಮ ಮೀರ್‌ ನೀಡುವ ಪ್ರದರ್ಶನವು ನಿರ್ಣಾಯಕ ಎನಿಸಲಿದೆ. ಮಧ್ಯದ ಓವರ್‌ಗಳಲ್ಲಿ ರನ್‌ ನಿಯಂತ್ರಿಸುವ ಜತೆಯಲ್ಲೇ, ವಿಕೆಟ್‌ಗಳನ್ನು ಗಳಿಸುವ ಸವಾಲು ಇವರ ಮೇಲಿದೆ. ಮತ್ತೊಂದೆಡೆ ಹಷ್ಮತ್‌ಉಲ್ಲಾ ಶಾಹಿದಿ ಬಳಗ ಅಚ್ಚರಿಯ ಫಲಿತಾಂಶ ನೀಡುವ ವಿಶ್ವಾಸದಲ್ಲಿದೆ. ರಹಮಾನುಲ್ಲಾ ಗುರ್ಬಾಜ್‌ ಹೊರತುಪಡಿಸಿ ಈ ತಂಡದ ಇತರ ಬ್ಯಾಟರ್‌ಗಳು ಗಮನ ಸೆಳೆದಿಲ್ಲ. ಪಾಕ್‌ ವಿರುದ್ಧ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಇನ್ನಷ್ಟು ಜವಾಬ್ದಾರಿಯಿಂದ ಆಡಬೇಕಿದೆ. ಪಾಕ್ 7–0 ಅಜೇಯ ಸಾಧನೆ ಏಕದಿನ ಕ್ರಿಕೆಟ್‌ನಲ್ಲಿ ಉಭಯ ತಂಡಗಳು ಏಳು ಸಲ ಎದುರಾಗಿದ್ದು ಪಾಕಿಸ್ತಾನ ತಂಡ ಎಲ್ಲ ಪಂದ್ಯಗಳನ್ನೂ ಗೆದ್ದಿದೆ. ಕೊಲಂಬೊದಲ್ಲಿ ಇದೇ ಆಗಸ್ಟ್‌ನಲ್ಲಿ ಕೊನೆಯದಾಗಿ ಹಣಾಹಣಿ ನಡೆಸಿದ್ದಾಗ ಪಾಕ್‌ 59 ರನ್‌ಗಳಿಂದ ಗೆದ್ದಿತ್ತು. ಇತಿಹಾಸ ತಮ್ಮ ಪರವಾಗಿದ್ದೂ ಅಚ್ಚರಿಯ ಫಲಿತಾಂಶ ನೀಡಬಲ್ಲ ಸಾಮರ್ಥ್ಯವನ್ನು ಅಫ್ಗನ್‌ ತಂಡ ಹೊಂದಿರುವುದರಿಂದ ಬಾಬರ್‌ ಬಳಗ ಎಚ್ಚರಿಕೆಯಿಂದಲೇ ಕಣಕ್ಕಿಳಿಯಲಿದೆ. ತಂಡಗಳು ಪಾಕಿಸ್ತಾನ: ಬಾಬರ್ ಆಜಂ (ನಾಯಕ) ಅಬ್ದುಲ್ಲಾ ಶಫೀಕ್ ಇಮಾಮ್ ಉಲ್ ಹಕ್ ಮೊಹಮ್ಮದ್ ರಿಜ್ವಾನ್ (ವಿಕೆಟ್‌ಕೀಪರ್) ಸೌದ್ ಶಕೀಲ್ ಇಫ್ತಿಕಾರ್ ಅಹಮದ್ ಶಾದಾಬ್ ಖಾನ್ ಉಸಾಮ ಮೀರ್ ಮೊಹಮ್ಮದ್ ನವಾಜ್ ಹಸನ್ ಅಲಿ ಶಹೀನ್ ಆಫ್ರಿದಿ ಹ್ಯಾರಿಸ್ ರವೂಫ್‌ ಮೊಹಮ್ಮದ್ ಹ್ಯಾರಿಸ್ ಮೊಹಮ್ಮದ್‌ ವಸೀಮ್ ಸಲ್ಮಾನ್‌ ಅಲಿ ಅಫ್ಗಾನಿಸ್ತಾನ: ಹಷ್ಮತ್‌ಉಲ್ಲಾ ಶಾಹಿದಿ (ನಾಯಕ) ರಹಮಾನುಲ್ಲಾ ಗುರ್ಬಾಜ್ (ವಿಕೆಟ್‌ ಕೀಪರ್) ಇಬ್ರಾಹಿಂ ಜದ್ರಾನ್‌ ರಿಯಾಝ್ ಹಸನ್ ರಹಮತ್‌ ಶಾ ನಜೀಬುಲ್ಲಾ ಜದ್ರಾನ್‌ ಮೊಹಮ್ಮದ್ ನಬಿ ಇಕ್ರಮ್ ಅಲಿಖಿಲ್ (ವಿಕೆಟ್‌ ಕೀಪರ್) ಅಜ್ಮತ್‌ಉಲ್ಲಾ ಒಮ್ರಾಝೈ ರಶೀದ್ ಖಾನ್ ಮುಜೀಬ್ ಉರ್‌ ರಹಮಾನ್ ನೂರ್ ಅಹ್ಮದ್ ಫಜಲಖ್ ಫರೂಖಿ ಅಬ್ದುಲ್ ರಹಮಾನ್ ಮತ್ತು ನವೀನ್ ಉಲ್ ಹಕ್. ಪಂದ್ಯ ಆರಂಭ: ಮಧ್ಯಾಹ್ನ 2 ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.