ಸಿಕ್ಕ ಅವಕಾಶ ಬಳಸಿಕೊಂಡೆ: ಹೆಂಡ್ರಿಕ್ಸ್‌ ಮುಂಬೈ (ಎಎಫ್‌ಪಿ): ಅಂತಿಮ ಕ್ಷಣದಲ್ಲಿ ಲಭಿಸಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸಾಧ್ಯವಾದದ್ದು ಸಂತಸ ಉಂಟುಮಾಡಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್‌ ರೀಜಾ ಹೆಂಡ್ರಿಕ್ಸ್‌ ಹೇಳಿದ್ದಾರೆ. ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, 229 ರನ್‌ಗಳಿಂದ ಇಂಗ್ಲೆಂಡ್‌ ತಂಡವನ್ನು ಮಣಿಸಿತ್ತು. ರೀಜಾ 85 ರನ್‌ ಗಳಿಸಿದ್ದರು. 34 ವರ್ಷದ ಅವರನ್ನು ಪಂದ್ಯದ ಟಾಸ್‌ಗೆ ಕೆಲವೇ ನಿಮಿಷಗಳ ಮುನ್ನ 11ರ ಬಳಗಕ್ಕೆ ಸೇರಿಸಿಕೊಳ್ಳಲಾಗಿತ್ತು. ನಾಯಕ ತೆಂಬಾ ಬವುಮಾ ಅನಾರೋಗ್ಯದಿಂದ ಹಿಂದೆ ಸರಿದದ್ದು ಹೆಂಡ್ರಿಕ್ಸ್‌ಗೆ ಅವಕಾಶ ಲಭಿಸಲು ಕಾರಣ. ತಮಗೆ ಲಭಿಸಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಈ ಅಗ್ರಕ್ರಮಾಂಕದ ಬ್ಯಾಟರ್‌ ಎರಡನೇ ವಿಕೆಟ್‌ಗೆ ರಸಿ ವ್ಯಾನ್‌ ಡೆರ್‌ ಡಸೆ ಜತೆ 121 ರನ್‌ ಸೇರಿಸಿದ್ದರು. ಇವರು ಹಾಕಿಕೊಟ್ಟ ಬುನಾದಿಯ ಮೇಲೆ ಇತರ ಬ್ಯಾಟರ್‌ಗಳು ಭರ್ಜರಿ ಆಟವಾಡಿದ್ದರಿಂದ ತಂಡ 7 ವಿಕೆಟ್‌ಗಳಿಗೆ 399 ರನ್‌ ಪೇರಿಸಿತ್ತು. ‘ಪಂದ್ಯದ ದಿನ ಇತರ ಆಟಗಾರರಂತೆ ನಾನೂ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದೆ. ಆದರೆ ಆಡಲು ಅವಕಾಶ ಲಭಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಟಾಸ್‌ಗೆ 10 ನಿಮಿಷಗಳಿರುವಾಗ ನನಗೆ ಆಡಬೇಕೆಂದು ಸೂಚಿಸಲಾಯಿತು. ಸವಾಲಿಗೆ ಮಾನಸಿಕವಾಗಿ ಸಿದ್ಧನಾದೆ’ ಎಂದು ಹೆಂಡ್ರಿಕ್ಸ್‌ ತಿಳಿಸಿದರು. ಇಂಗ್ಲೆಂಡ್‌ ದಾಳಿಯನ್ನು ದಿಟ್ಟವಾಗಿ ಎದುರಿಸಿದ್ದ ಅವರು ಶತಕ ಗಳಿಸುವ ಅವಕಾಶವನ್ನು ಕೇವಲ 15 ರನ್‌ಗಳಿಂದ ತಪ್ಪಿಸಿಕೊಂಡಿದ್ದರು. ‘ಕಳೆದ ಐದು ವರ್ಷಗಳಿಂದ ಆಡುತ್ತಿದ್ದರೂ, ತಂಡದಲ್ಲಿ ಸ್ಥಾನ ಭದ್ರಪಡಿಸಲು ಆಗಿಲ್ಲ. ಎರಡನೇ ಶತಕವನ್ನು ಶೀಘ್ರದಲ್ಲೇ ಗಳಿಸುವ ವಿಶ್ವಾಸ ನನ್ನದು’ ಎಂದರು. ಹೆಂಡ್ರಿಕ್ಸ್‌ ಅವರು 2018 ರಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಪದಾರ್ಪಣೆ ಪಂದ್ಯದಲ್ಲಿ ಮೊದಲ ಶತಕ ಗಳಿಸಿದ್ದರು. ಆ ಬಳಿಕ ಒಟ್ಟು 30 ಪಂದ್ಯಗಳನ್ನು ಆಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.