: ಗಿಲ್‌ ವೇಗದ 2000 ರನ್ ಧರ್ಮಶಾಲಾ (ಪಿಟಿಐ): ಭಾರತ ತಂಡದ ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌ ಅವರು ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗದಲ್ಲಿ 2000 ರನ್‌ ಪೂರೈಸಿದ ಸಾಧನೆ ಮಾಡಿದರು. ಗಿಲ್‌, ಕೇವಲ 38 ಇನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ಸ್ಥಾಪಿಸಿದರು. ದಕ್ಷಿಣ ಆಫ್ರಿಕಾದ ಹಾಶಿಮ್‌ ಆಮ್ಲಾ (40 ಇನಿಂಗ್ಸ್‌) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. 24 ವರ್ಷದ ಗಿಲ್‌ ಅವರಿಗೆ 2000 ರನ್‌ಗಳ ಗಡಿ ತಲುಪಲು 14 ರನ್‌ಗಳು ಬೇಕಿದ್ದವು. ಭಾರತದ ಇನಿಂಗ್ಸ್‌ನ ಏಳನೇ ಓವರ್‌ನಲ್ಲಿ ಟ್ರೆಂಟ್‌ ಬೌಲ್ಟ್‌ ಅವರ ಎಸೆತದಲ್ಲಿ ಬೌಂಡರಿ ಹೊಡೆಯುವ ಮೂಲಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡರು. ಅವರು 31 ಎಸೆತಗಳಲ್ಲಿ 26 ರನ್‌ ಗಳಿಸಿ ಔಟಾದರು. ಆಮ್ಲಾ ಅವರು 2011ರ ಜ.21 ರಂದು ಪೋರ್ಟ್‌ ಎಲಿಜಬೆತ್‌ನ ಸೇಂಟ್‌ ಜಾರ್ಜ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತದ ವಿರುದ್ಧದ ಪಂದ್ಯದಲ್ಲಿ ಈ ದಾಖಲೆ ಮಾಡಿದ್ದರು. ವಿಶ್ವಕಪ್‌ ಟೂರ್ನಿಯ ಆರಂಭದ ವೇಳೆ ಡೆಂಗಿಯಿಂದ ಬಳಲಿದ್ದ ಗಿಲ್, ಆಸ್ಟ್ರೇಲಿಯಾ ಮತ್ತು ಅಫ್ಗಾನಿಸ್ತಾನ ಎದುರಿನ ಪಂದ್ಯಗಳಲ್ಲಿ ಆಡಿರಲಿಲ್ಲ. ಪಾಕಿಸ್ತಾನ ವಿರುದ್ಧ 16 ಹಾಗೂ ಬಾಂಗ್ಲಾದೇಶ ತಂಡದ ಎದುರು 53 ರನ್‌ ಗಳಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.