ಮುಂಬೈನಲ್ಲೂ ರನ್‌ ಹೊಳೆ ಹರಿಸುವುದೇ ದಕ್ಷಿಣ ಆಫ್ರಿಕಾ ಮುಂಬೈ: ಈ ಬಾರಿಯ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ರನ್‌ಗಳ ಪ್ರವಾಹವನ್ನೇ ಹರಿಸುತ್ತಿರುವ ದಕ್ಷಿಣ ಆಫ್ರಿಕಾ ತಂಡವು ಎರಡು ಬಾರಿ ನಾಲ್ಕನೂರು ರನ್‌ಗಳಿಗಿಂತ ಹೆಚ್ಚು ಮೊತ್ತ ಗಳಿಸಿದೆ. ಈ ತಂಡದ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಸಿಡಿಲಬ್ಬರದ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದಿದೆ. ಮಂಗಳವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ಎದುರು ನಡೆಯಲಿರುವ ಪಂದ್ಯದಲ್ಲಿಯೂ ಜಯ ಗಳಿಸುವ ವಿಶ್ವಾಸದಲ್ಲಿದೆ. ಟೂರ್ನಿಯಲ್ಲಿ ಇದುವರೆಗೂ ಏಡನ್ ಮರ್ಕರಂ ನಾಯಕತ್ವದ ದಕ್ಷಿಣ ಆಫ್ರಿಕಾ ಬಳಗವು ಅಚ್ಚರಿ ಮೂಡಿಸುವಂತಹ ಆಟವಾಡಿದೆ. ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ 428 ರನ್‌ ಗಳ ಗುರಿ ನೀಡಿ ಗೆದ್ದಿತ್ತು. ಬಲಿಷ್ಠ ಆಸ್ಟ್ರೇಲಿಯಾದ ಎದುರು 134 ರನ್‌ಗಳ ಅಂತರದಿಂದ ಜಯಿಸಿತ್ತು. ಆದರೆ ಮೂರನೇ ಪಂದ್ಯದಲ್ಲಿ ‘ದುರ್ಬಲ‘ ನೆದರ್ಲೆಂಡ್ಸ್ ಎದುರು 38 ರನ್‌ಗಳಿಂದ ಸೋತಿತ್ತು. ನಾಲ್ಕನೇ ಪಂದ್ಯದಲ್ಲಿ ಪುಟಿದೆದ್ದ ಮರ್ಕರಂ ಬಳಗವು ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ಗೆ 229 ರನ್‌ಗಳ ಸೋಲಿನ ರುಚಿ ಉಣಿಸಿತು. ಈ ಪಂದ್ಯದಲ್ಲಿಯೂ ದಕ್ಷಿಣ ಆಫ್ರಿಕಾ ತಂಡವು 399 ರನ್‌ ಗುರಿ ಒಡ್ಡಿತ್ತು. ಇದೀಗ ಸತತ ಮೂರು ಸೋಲುಗಳಿಂದ ಕಂಗಾಲಾಗಿರುವ ಬಾಂಗ್ಲಾ ತಂಡಕ್ಕೆ ದಕ್ಷಿಣ ಆಫ್ರಿಕಾದ ಓಟಕ್ಕೆ ಕಡಿವಾಣ ಹಾಕುವ ಒತ್ತಡವಿದೆ. ಆದರೆ, ಎರಡು ಶತಕ ಹೊಡೆದಿರುವ ಕ್ವಿಂಟನ್ ಡಿಕಾಕ್, ತಲಾ ಒಂದು ಶತಕ ಗಳಿಸಿರುವ ನಾಯಕ ಏಡನ್, ರಸಿ ವ್ಯಾನ್ ಡೆರ್ ಡಸೆನ್, ಹೆನ್ರಿಚ್ ಕ್ಲಾಸೆನ್ ಅವರ ಅಬ್ಬರವನ್ನು ಕಟ್ಟಿಹಾಕುವುದು ಬಾಂಗ್ಲಾ ಬೌಲರ್‌ಗಳ ಮುಂದಿರುವ ಪ್ರಮುಖ ಸವಾಲು. ಕಳೆದ ಪಂದ್ಯದಲ್ಲಿ ಭಾರತದ ಎದುರು ಬಾಂಗ್ಲಾದ ಬೌಲರ್‌ಗಳಾದ ಶೊರಿಫುಲ್ ಇಸ್ಲಾಂ, ನಸುಮ್ ಅಹಮದ್, ಹಸನ್ ಮೆಹಮೂದ, ಮೆಹದಿ ಹಸನ್ ಮಿರಾಜ್ ಅವರು ದುಬಾರಿಯಾಗಿದ್ದರು. ಶಕೀಬ್ ಅಲ್ ಹಸನ್ ಆ ಪಂದ್ಯದಲ್ಲಿ ಆಡಿರಲಿಲ್ಲ. ದಕ್ಷಿಣ ಆಫ್ರಿಕಾ ಎದುರು ಕೂಡ ಅವರು ಆಡುವುದು ಅನುಮಾನ. ಇದರಿಂದಾಗಿ ಬೌಲಿಂಗ್‌ ನಲ್ಲಿ ಅನುಭವಿಗಳ ಕೊರತೆ ಕಾಡಬಹುದು. ಆದರೆ ದಕ್ಷಿಣ ಆಫ್ರಿಕಾದಲ್ಲಿ ಅನುಭವಿ ಅನುಭವಿ ವೇಗಿಗಳು ಮತ್ತು ಸ್ಪಿನ್ನರ್‌ಗಳು ಇದ್ದಾರೆ. ಬಾಂಗ್ಲಾದ ಆರಂಭಿಕ ಜೋಡಿ ತಂಜಿದ್ ಹಸನ್ ಮತ್ತು ಲಿಟನ್ ದಾಸ್ ಉತ್ತಮ ಲಯದಲ್ಲಿದ್ದಾರೆ. ಉಳಿದ ಬ್ಯಾಟರ್‌ಗಳ ಫಾರ್ಮ್ ಅಸ್ಥಿರವಾಗಿದೆ. ಆದರೆ ನೆದರ್ಲೆಂಡ್ಸ್‌ ವಿರುದ್ಧ ಸೋಲಿನಿಂದಾಗಿ ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸದಿರುವ ಪಾಠವನ್ನು ಮರ್ಕರಂ ಬಳಗ ಕಲಿತಿರಬಹುದು. ಬಾಂಗ್ಲಾ ತಂಡದ ವಿರುದ್ಧ ಸುಲಭ ಜಯದ ನಿರೀಕ್ಷೆ ಮಾಡದೇ ತನ್ನ ನೈಜ ಹಾಗೂ ಹೊಣೆಗಾರಿಕೆಯ ಆಟವನ್ನು ನೆಚ್ಚಿಕೊಳ್ಳಬಹುದು. - ತಂಡಗಳು: ದಕ್ಷಿಣ ಆಫ್ರಿಕಾ: ಏಡನ್ ಮರ್ಕರಂ (ನಾಯಕ) ಕ್ವಿಂಟನ್ ಡಿ ಕಾಕ್ ರೀಜಾ ಹೆನ್ರಿಕ್ಸ್ ರಸಿ ವ್ಯಾನ್ ಡೆರ್ ಡಸೆ ಹೆನ್ರಿಚ್ ಕ್ಲಾಸೆನ್ ಡೇವಿಡ್ ಮಿಲ್ಲರ್ ಮಾರ್ಕೊ ಜೆನ್ಸನ್ ಗೆರಾಲ್ಡ್ ಕೋಝಿ ಕೇಶವ್ ಮಹಾರಾಜ ಕಗಿಸೊ ರಬಾಡ ಲುಂಗಿ ಗಿಡಿ ತೆಂಬಾ ಬವುಮಾ ತಬ್ರೇಜ್ ಶಮ್ಸಿ ಆ್ಯಂಡಿಲೆ ಪಿಶುವಾಯೊ ಲಿಜಾದ್ ವಿಲಿಯಮ್ಸ್. ಬಾಂಗ್ಲಾದೇಶ: ನಜ್ಮುಲ್ ಹೊಸೆನ್ ಶಾಂತೊ (ನಾಯಕ) ಮೆಹದಿನ ಹಸನ್ ಮಿರಾಜ್ ತೌಹಿದ್ ಹೃದಯ್ ಮುಷ್ಫಿಕುರ್ ರಹೀಮ್ (ವಿಕೆಟ್‌ಕೀಪರ್) ಮಹಮುದುಲ್ಲಾ ನಸೂಮ್ ಅಹಮದ್ ಹಸನ್ ಮೆಹಮೂದ್ ಮುಸ್ತಫಿಜುರ್ ರೆಹಮಾನ್ ಶೊರಿಫುಲ್ ಇಸ್ಲಾಂ ತಂಜೀಮ್ ಹಸನ್ ಸಕೀಬ್ ಮೆಹದಿ ಹಸನ್ ತಸ್ಕಿನ್ ಅಹಮದ್. ಪಂದ್ಯ ಆರಂಭ: ಮಧ್ಯಾಹ್ನ 2 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ ಹಾಟ್‌ಸ್ಟಾರ್ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.