2023: 282 ರನ್‌ಗಳಿಗೆ ಪಾಕಿಸ್ತಾನವನ್ನು ಕಟ್ಟಿ ಹಾಕಿದ ಅಫ್ಗನ್ ಚೆನ್ನೈ: ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಇಂದು (ಸೋಮವಾರ) ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಅಫ್ಗಾನಿಸ್ತಾನ ಆಟಗಾರರ ಶಿಸ್ತುಬದ್ದ ಬೌಲಿಂಗ್ ದಾಳಿಗೆ ಮಂಕಾದ ಪಾಕಿಸ್ತಾನ ಆಟಗಾರರು 7 ವಿಕೆಟ್ ಕಳೆದುಕೊಂಡು 282 ರನ್‌ಗಳ ಸಾಧಾರಣ ಗುರಿಯನ್ನು ನೀಡಿದ್ದಾರೆ. ಪಾಕಿಸ್ತಾನದ ಪರ ಅಬ್ದುಲ್ ಶಾಫಿಕ್ (58) ಮತ್ತು ಬಾಬರ್ ಅಜಂ (74) ಮಾತ್ರ ಉತ್ತಮ ಪ್ರದರ್ಶನ ತೋರಿದರು. ಇಮಾಮ್ ಉಲ್ ಹಕ್ 17, ಮೊಹಮ್ಮದ್ ರಿಜ್ವಾನ್ 8, ಶಕೀಲ್ 25, ಶಾದಾಬ್ ಖಾನ್ 40, ಇಫ್ತಿಕಾರ್ ಅಹಮ್ಮದ್ 40, ಶಾಹೀನ್ ಆಫ್ರೀದಿ 3 ರನ್ ಹೊಡೆದರು. ಅಫ್ಗಾನಿಸ್ತಾನ ಪರ ನೂರ್ ಅಹಮ್ಮದ್ 3 ವಿಕೆಟ್ ಕಬಳಿಸಿ ಗಮನ ಸೆಳೆದರು. ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅಫ್ಗನ್‌ ವಿರುದ್ಧ ಟಾಸ್‌ ಗೆದ್ದಿರುವ ಪಾಕ್, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಇತ್ತೀಚಿನ ವರದಿಗಳ ಪ್ರಕಾರ ಅಫ್ಗಾನಿಸ್ತಾನ ಯಾವುದೇ ವಿಕೆಟ್ ನಷ್ಟವಿಲ್ಲದೇ 3 ಓವರ್‌ಗಳಲ್ಲಿ 25 ರನ್ ಕಲೆ ಹಾಕಿತ್ತು. ಸತತ ಎರಡು ಪಂದ್ಯಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಎದುರು ಪರಾಭವಗೊಂಡಿರುವ ಪಾಕಿಸ್ತಾನ ತಂಡಕ್ಕೆ ಸೋಮವಾರ ಗೆಲುವು ಅನಿವಾರ್ಯ. ಇನ್ನೊಂದು ಸೋಲು ಎದುರಾದರೆ ಸೆಮಿಫೈನಲ್‌ ಪ್ರವೇಶದ ಸಾಧ್ಯತೆ ಕ್ಷೀಣಿಸಲಿದೆ. ನಾಲ್ಕು ಪಾಯಿಂಟ್ಸ್‌ ಹೊಂದಿರುವ ಬಾಬರ್‌ ಬಳಗ ಈಗ ಐದನೇ ಸ್ಥಾನದಲ್ಲಿದೆ. ಆದರೆ ರನ್‌ರೇಟ್‌ (–0.456) ಕಡಿಮೆ ಇರುವುದು ಚಿಂತೆಗೆ ಕಾರಣವಾಗಿದೆ. ಸ್ಪಿನ್‌ ದಾಳಿ ಎದುರಿಸುವಲ್ಲಿ ಬ್ಯಾಟರ್‌ಗಳ ದೌರ್ಬಲ್ಯವು ಪಾಕ್‌ ತಂಡಕ್ಕೆ ತಲೆನೋವು ಉಂಟುಮಾಡಿದೆ. ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ತಂಡದ ನಾಲ್ವರು ಪ್ರಮುಖ ಬ್ಯಾಟರ್‌ಗಳು ಆಸ್ಟ್ರೇಲಿಯಾದ ಸ್ಪಿನ್ನರ್‌ ಆ್ಯಡಮ್‌ ಜಂಪಾ ಅವರಿಗೆ ವಿಕೆಟ್‌ ಒಪ್ಪಿಸಿದ್ದರು. ಜಂಪಾ ಅವರ ಎಸೆತಗಳ ಗತಿಯನ್ನು ಅಂದಾಜಿಸುವಲ್ಲಿ ಎಡವಿದ್ದರು. ಅಫ್ಗನ್‌ ತಂಡದ ಪ್ರಮುಖ ಶಕ್ತಿ ಸ್ಪಿನ್ನರ್‌ಗಳೇ ಆಗಿದ್ದಾರೆ. ರಶೀದ್‌ ಖಾನ್, ಮೊಹಮ್ಮದ್ ನಬಿ ಮತ್ತು ಮುಜೀಬ್‌ ಉರ್‌ ರಹಮಾನ್‌ ಅವರು ಇಲ್ಲಿನ ಪಿಚ್‌ನಲ್ಲಿ ಪ್ರಮುಖ ಬ್ಯಾಟರ್‌ಗಳನ್ನು ಕಾಡುವ ಸಾಮರ್ಥ್ಯ ಹೊಂದಿದ್ದಾರೆ. ತಂಡಗಳು ಪಾಕಿಸ್ತಾನ: ಬಾಬರ್ ಆಜಂ (ನಾಯಕ) ಅಬ್ದುಲ್ಲಾ ಶಫೀಕ್, ಇಮಾಮ್ ಉಲ್ ಹಕ್, ಮೊಹಮ್ಮದ್ ರಿಜ್ವಾನ್ (ವಿಕೆಟ್‌ಕೀಪರ್) ಸೌದ್ ಶಕೀಲ್, ಇಫ್ತಿಕಾರ್ ಅಹಮದ್, ಶಾದಾಬ್ ಖಾನ್, ಉಸಾಮ ಮೀರ್, ಶಹೀನ್ ಆಫ್ರಿದಿ, ಹಸನ್ ಅಲಿ, ಹ್ಯಾರಿಸ್ ರವೂಫ್‌ ಅಫ್ಗಾನಿಸ್ತಾನ: ಹಷ್ಮತ್‌ಉಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್‌, ರಹಮತ್‌ ಶಾ, ಅಜ್ಮತ್‌ಉಲ್ಲಾ ಒಮ್ರಾಝೈ, ಇಕ್ರಮ್ ಅಲಿಖಿಲ್ (ವಿಕೆಟ್‌ ಕೀಪರ್), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್‌ ರಹಮಾನ್, ವೀನ್ ಉಲ್ ಹಕ್, ನೂರ್ ಅಹ್ಮದ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.