ಶ್ರೇಷ್ಠತೆಯ ಬದಲಾಗಿ ಸುಧಾರಣೆ ಸಾಧಿಸುವುದು ನನ್ನ ಧ್ಯೇಯ: ವಿರಾಟ್ ಕೊಹ್ಲಿ ಚೆನ್ನೈ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರು, 'ಪಂದ್ಯದಿಂದ ಪಂದ್ಯಕ್ಕೆ ಸುಧಾರಣೆ ಸಾಧಿಸುವುದರತ್ತ ಗಮನ ನೀಡುತ್ತೇನೆಯೇ ಹೊರತು, ಶ್ರೇಷ್ಠತೆಯ ಕಡೆಗಲ್ಲ' ಎಂದು ಹೇಳಿದ್ದಾರೆ. ಈ ಬಾರಿಯ ವಿಶ್ವಕಪ್‌ ಟೂರ್ನಿಯಲ್ಲಿ ಐದು ಪಂದ್ಯಗಳಲ್ಲಿ ಆಡಿರುವ ಟೀಂ ಇಂಡಿಯಾ, ಏಕೈಕ ಅಜೇಯ ತಂಡವಾಗಿ ಮುನ್ನುಗ್ಗುತ್ತಿದೆ. ವಿಶೇಷವೆಂದರೆ ರೋಹಿತ್‌ ಶರ್ಮಾ ಪಡೆ ಎಲ್ಲ ಪಂದ್ಯಗಳಲ್ಲೂ ಗುರಿ ಬೆನ್ನಟ್ಟಿ ಗೆದ್ದಿದೆ. ಕೊಹ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಭಾರತಕ್ಕೆ ನೆರವಾಗಿದ್ದಾರೆ. ಅಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ 85 ರನ್ ಗಳಿಸಿದ್ದ ಕೊಹ್ಲಿ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 16 ರನ್‌ ಗಳಿಸಿದ್ದರು. ನಂತರ ಅಫ್ಗಾನಿಸ್ತಾನ ಅಜೇಯ 55 ರನ್, ಬಾಂಗ್ಲಾದೇಶ ವಿರುದ್ಧ ಅಜೇಯ 103 ರನ್‌ ಮತ್ತು ನ್ಯೂಜಿಲೆಂಡ್ ವಿರುದ್ಧ 95 ರನ್‌ ಗಳಿಸಿದ್ದರು. ಹೀಗಾಗಿ ಕೊಹ್ಲಿಯ 'ರನ್‌ ಚೇಸ್‌' ಆಟಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅಭಿಮಾನಿಗಳು ಮತ್ತು ಕೆಲ ಕ್ರಿಕೆಟ್‌ ಪಂಡಿತರು ಅವರನ್ನು ನಿಗದಿತ ಓವರ್‌ ಮಾದರಿಯ ಶ್ರೇಷ್ಠ ಕ್ರಿಕೆಟಿಗ ಎಂದು ಕರೆಯುತ್ತಿದ್ದಾರೆ. ತಮ್ಮ ಬ್ಯಾಟಿಂಗ್‌ ಕುರಿತು 'ಸ್ಟಾರ್‌ಸ್ಪೋರ್ಟ್ಸ್‌' ಕ್ರೀಡಾವಾಹಿನಿಯೊಂದಿಗೆ ಮಾತನಾಡಿರುವ ಕೊಹ್ಲಿ, 'ಪ್ರತಿದಿನ, ಪ್ರತಿ ಅಭ್ಯಾಸದ ಅವಧಿ, ಪ್ರತಿ ವರ್ಷ, ಪ್ರತಿ ಋತುವಿನಲ್ಲಿ ನನ್ನನ್ನು ನಾನು ಮತ್ತಷ್ಟು ಸುಧಾರಿಸಿಕೊಳ್ಳುವುದು ಹೇಗೆ ಎಂಬುದರತ್ತ ಗಮನಹರಿಸಿ ಕಾರ್ಯಪ್ರವತ್ತನಾಗುತ್ತೇನೆ. ಹಾಗಾಗಿಯೇ ನಾನು ಇಷ್ಟು ದೀರ್ಘ ಕಾಲ ಆಡಲು ಸಾಧ್ಯವಾಗಿದೆ. ಆ ಮನಸ್ಥಿತಿ ಇಲ್ಲದೆಯೂ ನಿರಂತರವಾಗಿ ಪ್ರದರ್ಶನ ನೀಡಲು ಸಾಧ್ಯ ಎಂದು ನನಗನಿಸಿಲ್ಲ' ಎಂದು ಹೇಳಿದ್ದಾರೆ. 'ಶ್ರೇಷ್ಠತೆಯ ಬದಲಾಗಿ ಸುಧಾರಣೆ ಸಾಧಿಸುವುದು ನನ್ನ ಧ್ಯೇಯ. ಏಕೆಂದರೆ, ಪ್ರಾಮಾಣಿಕವಾಗಿ ಹೇಳುತ್ತೇನೆ ಶ್ರೇಷ್ಠತೆಯ ವ್ಯಾಖ್ಯಾನವೇನು ಎಂಬುದು ನನಗೆ ಗೊತ್ತಿಲ್ಲ. ಅದಕ್ಕೆ ಮಿತಿ ಎಂಬುದೇ ಇಲ್ಲ. ನೀವು ಈ ಹಂತ ತಲುಪಿದರೆ, ಶ್ರೇಷ್ಠತೆಯನ್ನು ಸಾಧಿಸಿದ್ದೀರಿ ಎನ್ನಲು ಯಾವುದೇ ಪ್ರಮಾಣಿತ ಮಾನದಂಡ ಇಲ್ಲ. ಹಾಗಾಗಿ ನಾನು ಪ್ರತಿದಿನ ಸುಧಾರಣೆಗಾಗಿ ಶ್ರಮಿಸುತ್ತೇನೆ' ಎಂದು ಅಭಿಪ್ರಾಯಪಟ್ಟಿದ್ದಾರೆ. ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಸದ್ಯ ಎರಡನೇ ಸ್ಥಾನದಲ್ಲಿರುವ ವಿರಾಟ್‌, 1 ಶತಕ ಹಾಗೂ 3 ಅರ್ಧಶತಗಳ ಸಹಿತ 118ರ ಸರಾಸರಿಯಲ್ಲಿ 354 ರನ್‌ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟನ್‌ ಡಿ ಕಾಕ್‌ (5 ಇನಿಂಗ್ಸ್‌, 407 ರನ್‌) ಮಾತ್ರವೇ ಕೊಹ್ಲಿಗಿಂತ ಮುಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.