: ದ.ಆಫ್ರಿಕಾ ಎದುರು ಪಾಕಿಸ್ತಾನಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ ‌ಚೆನ್ನೈ: ಹ್ಯಾಟ್ರಿಕ್‌ ಸೋಲುಗಳ ನಂತರ ಪಾಕಿಸ್ತಾನ ತಂಡದ ನಾಯಕ ಬಾಬರ್‌ ಆಜಂ ಅವರ ಪಟ್ಟ ಅಲುಗಾಡಲು ಆರಂಭವಾಗಿದೆ. ಪ್ರಬಲ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಶುಕ್ರವಾರ ನಡೆಯಲಿರುವ ಏಕದಿನ ವಿಶ್ವಕಪ್‌ ಪಂದ್ಯ ಪಾಕ್‌ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತೆ ಇದೆ. ನಾಯಕ ಬಾಬರ್ ಆಜಂ ಅವರು ಗೆಲುವೊಂದರ ಮೂಲಕ ತಂಡಕ್ಕೆ ಸ್ಫೂರ್ತಿ ತುಂಬುವ ಸವಾಲನ್ನು ಎದುರಿಸುತ್ತಿದ್ದಾರೆ. ಇನ್ನೊಂದು ಸೋಲು ತಂಡವನ್ನು ಹೊರದೂಡಲಿದ್ದು ಅವರ ನಾಯಕತ್ವಕ್ಕೂ ಕುತ್ತು ತರಲಿದೆ. ಈ ಹಿಂದಿನ ವಿಶ್ವಕಪ್‌ಗಳಲ್ಲಿ ಪಾಕ್‌ ತಂಡ ಟೂರ್ನಿಯಿಂದ ಹೊರಬೀಳುವ ಹಂತದಲ್ಲಿರುವಾಗಲೇ ಪುನರಾಗಮನ ಮಾಡಿದ ನಿದರ್ಶನಗಳಿವೆ. ಅಂಥ ಮ್ಯಾಜಿಕ್ ಒಂದನ್ನು ಬಾಬರ್ ನಿರೀಕ್ಷಿಸುತ್ತಿದ್ದಾರೆ. ಈ ಪಂದ್ಯದ ನಂತರ ಪಾಕಿಸ್ತಾನಕ್ಕೆ ಮೂರು ಪಂದ್ಯಗಳಷ್ಟೇ ಆಡಲು ಉಳಿಯಲಿದ್ದು ಎಲ್ಲವೂ ನಿರ್ಣಾಯಕವೇ. ಯಾವ ನಿರ್ದಿಷ್ಟ ದಿನ ಪಾಕ್ ತಂಡ ಪುಟಿದೇಳಲಿದೆ ಎನ್ನುವುದು ಹೇಳಲಸಾಧ್ಯ ಎಂಬ ಮಾತು ವಿಶ್ವ ಕ್ರಿಕೆಟ್‌ನಲ್ಲಿದೆ. ಯಾರಾದರೊಬ್ಬರು ಕೆಚ್ಚೆದೆಯ ಆಟವಾಡಿ ತಂಡಕ್ಕೆ ಸ್ಫೂರ್ತಿ ತುಂಬಿದ ಉದಾಹರಣೆಗಳು ಇವೆ. ಬಾಬರ್ ಈಗ ಅಂಥದ್ದೇ ಆಶಾವಾದಲ್ಲಿದ್ದಾರೆ. ನೆದರ್ಲೆಂಡ್ಸ್‌ ವಿರುದ್ಧ ಧರ್ಮಶಾಲಾದಲ್ಲಿ ಒಂದು ಆಘಾತಕಾರಿ ಸೋಲು ಬಿಟ್ಟರೆ, ಉಳಿದಂತೆ ದಕ್ಷಿಣ ಆಫ್ರಿಕಾ ಈ ಬಾರಿ ಎದುರಾಳಿ ತಂಡಗಳನ್ನು ಸದೆಬಡಿದಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳ ಪ್ರದರ್ಶನದ ಮಟ್ಟದಲ್ಲಿ ದೊಡ್ಡ ಕಂದರವಿದೆ. ಕ್ವಿಂಟನ್ ಡಿಕಾಕ್ ಮತ್ತು ಹೆನ್ರಿಚ್‌ ಕ್ಲಾಸೆನ್ ಅವರು ಸರಾಗವಾಗಿ ರನ್ ಗಳಿಸುತ್ತಿದ್ದಾರೆ. ಕ್ವಿಂಟನ್ ಈಗಾಗಲೇ ಮೂರು ಶತಕಗಳನ್ನು ಹೊಡೆದಿದ್ದು, ಟೂರ್ನಿಯ ಯಶಸ್ವಿ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಜೊತೆಗೆ ಏಡನ್ ಮರ್ಕರಂ, ಡೇವಿಡ್‌ ಮಿಲ್ಲರ್ ಮೊದಲಾದವರಿಂದ ಸಕಾಲಿಕ ನೆರವೂ ಸಿಗುತ್ತಿದೆ. ಈ ಟೂರ್ನಿ ಅರ್ಧಭಾಗದಷ್ಟು ಕಳೆದಿದ್ದರೂ, ಗತಕಾಲದ ಬ್ಯಾಟಿಂಗ್‌ ಶೈಲಿ ಪಾಕ್‌ ತಂಡವನ್ನು ಇಕ್ಕಟ್ಟಿಗೆ ತಳ್ಳಿದೆ. ಆಕ್ರಮಣದ ಆಟ ಆ ತಂಡದಿಂದ ಬರುತ್ತಿಲ್ಲ. ಐದು ಪಂದ್ಯಗಳಿಂದ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳಿಂದ 59 ಸಿಕ್ಸರ್‌, 155 ಬೌಂಡರಿಗಳು ಬಂದರೆ, ಪಾಕಿಸ್ತಾನದ ಆಟಗಾರರಿಂದ 24 ಸಿಕ್ಸರ್‌, 136 ಬೌಂಡರಿಗಳು ಬಂದಿವೆ. ಪಾಕ್ ತಂಡಕ್ಕೆ ಹೋಲಿಸಿದರೆ, ಸ್ಟ್ರೈಕ್‌ ರೇಟ್‌ಲ್ಲೂ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಬಹಳ ಮುಂದಿದ್ದಾರೆ. ಒಂದೆರಡು ಬಾರಿ ಬಿಟ್ಟರೆ ಶಾಹಿನ್ ಶಾ ಅಫ್ರೀದಿ ಭರವಸೆಗೆ ತಕ್ಕಂತೆ ಬೌಲಿಂಗ್ ಪ್ರದರ್ಶಿಸಿಲ್ಲ. ಹ್ಯಾರಿಸ್ ರವೂಫ್‌ ಏಕದಿನ ಮಾದರಿಯಲ್ಲಿ ಅಷ್ಟೇನೂ ಪರಿಣಾಮಕಾರಿ ಎನಿಸಿಲ್ಲ. ಹೊಸ ಚೆಂಡು ಹಂಚಿಕೊಳ್ಳುತ್ತಿದ್ದ ವೇಗಿ ನಸೀಮ್‌ ಶಾ ಗೈರು ಎದ್ದುಕಾಣುತ್ತಿದೆ. ಹೀಗಾಗಿ ಜಮಾನ್‌ ಖಾನ್ ಅಥವಾ ಮುಹಮ್ಮದ್ ವಾಸಿಂ ಜೂನಿಯರ್‌ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡರೂ ಅಚ್ಚರಿಯಿಲ್ಲ. ಗುಣಮಟ್ಟದ ಸ್ಪಿನ್ನರ್ ಇಲ್ಲದಿರುವುದು ಚಿಪಾಕ್‌ನಲ್ಲಿ ಪಾಕ್ ತಂಡವನ್ನು ಕಾಡಬಹುದು. ಲೆಗ್‌ ಸ್ಪಿನ್ನರ್‌ ಉಸಾಮ ಮೀರ್ ಎರಡು ಪಂದ್ಯಗಳಲ್ಲಿ ದಂಡನೆಗೆ ಒಳಗಾಗಿದ್ದಾರೆ. ಶಾದಾಬ್ ಖಾನ್ ಕೂಡ ಪರಿಣಾಮಕಾರಿ ಎನಿಸಿಲ್ಲ. ಎಡಗೈ ಸ್ಪಿನ್ನರ್ ಮೊಹಮ್ಮದ್ ನವಾಜ್ ಕೂಡ ಪಾಕ್ ತಂಡದ ಸಮಸ್ಯೆಗೆ ಪರಿಹಾರವಾಗಿಲ್ಲ. ಇನ್ನೊಂದೆಡೆ, ದಕ್ಷಿಣ ಆಫ್ರಿಕಾದ ವೇಗಿಗಳಾದ ಕಗಿಸೊ ರಬಾಡ, ಜಾನ್ಸನ್ ಮತ್ತು ಜೆರಾಲ್ಡ್‌ ಕೊಯೆಟ್ಜಿ ಎದುರಾಳಿಗಳನ್ನು ಕಾಡಿದ್ದಾರೆ. ಮಧ್ಯಮ ಹಂತದಲ್ಲಿ ಸ್ಪಿನ್ನರ್ ಕೇಶವ ಮಹಾರಾಜ್ ಕೂಡ ಎದುರಾಳಿ ಬ್ಯಾಟರ್‌ಗಳಿಗೆ ಅಂಕುಶ ಹಾಕುವಲ್ಲಿ ಯಶಸ್ವಿ ಆಗಿದ್ದಾರೆ. ಹೀಗಾಗಿ ಮೇಲ್ನೋಟಕ್ಕೆ ದಕ್ಷಿಣ ಆಫ್ರಿಕಾ ಸುಸ್ಥಿತಿಯಲ್ಲಿದೆ. ತಂಡ ಜಯಶಾಲಿಯಾದರೆ ಸೆಮಿಫೈನಲ್ ಹಾದಿ ಇನ್ನಷ್ಟು ಸುಗಮವಾಗಲಿದೆ. ಪಂದ್ಯ ಆರಂಭ: ಮಧ್ಯಾಹ್ನ 2 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.