ವಿರಾಟ್ ಹುಟ್ಟುಹಬ್ಬದಂದು ವಿಶ್ವಕಪ್ ಪಂದ್ಯ: 70,000 'ಕೊಹ್ಲಿ ಮಾಸ್ಕ್' ವಿತರಣೆ ಕೋಲ್ಕತ್ತ: ಭಾರತ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ನವೆಂಬರ್ 05ರಂದು 35ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅಂದೇ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯವನ್ನು ಆಡಲಿದೆ. ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುವ ಈ ಪಂದ್ಯದ ಸಂದರ್ಭ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರಿಗೆ ಚಿಯರ್ ಮಾಡಲು ಮೈದಾನಕ್ಕೆ ಬರುವ 70,000 ಅಭಿಮಾನಿಗಳಿಗೆ ಉಚಿತವಾಗಿ ‘ವಿರಾಟ್ ಕೊಹ್ಲಿ ಮಾಸ್ಕ್’ವಿತರಿಸಲು ನಿರ್ಧರಿಸಲಾಗಿದೆ. ಕಿಂಗ್ ಕೊಹ್ಲಿ ಅವರ ಕುಟ್ಟುಹಬ್ಬವನ್ನು ಸ್ಮರಣೀಯಗೊಳಿಸುವ ಉದ್ದೆಶದಿಂದ ಪಶ್ಚಿಮ ಬಂಗಾಳ ಕ್ರಿಕೆಟ್ ಮಂಡಳಿಯು(ಸಿಎಬಿ) ಈ ಯೋಜನೆ ಮಾಡಿಕೊಂಡಿದೆ. ಪಂದ್ಯದ ಎಲ್ಲ ಟಿಕೆಟ್‌ಗಳು ಈಗಾಗಲೇ ಸೋಲ್ಡ್ ಔಟ್ ಆಗಿದ್ದು, ಕ್ರೀಡಾಂಗಣ ಕ್ರಿಕೆಟ್ ಅಭಿಮಾನಿಗಳಿಂದ ತುಂಬಿ ತುಳುಕುವುದು ಪಕ್ಕಾ ಆಗಿದೆ. ಮಾಸ್ಕ್‌ಗಳ ವಿತರಣೆ ಜೊತೆಗೆ ಪಂದ್ಯ ಆರಂಭಕ್ಕೂ ಮುನ್ನ ಕೇಕ್ ಕತ್ತರಿಸುವ ಮತ್ತು ಮೆಮೆಂಟೊ ವಿತರಣೆ ಕಾರ್ಯಕ್ರಮವನ್ನೂ ಸಿಎಬಿ ಹಮ್ಮಿಕೊಂಡಿದೆ. ‘ಇದಕ್ಕೆ ಐಸಿಸಿಯಿಂದ ಒಪ್ಪಿಗೆ ಸಿಗುವ ವಿಶ್ವಾಸವಿದೆ. ವಿರಾಟ್ ಕೊಹ್ಲಿಗೆ ಈ ದಿನವನ್ನು ಅವಿಸ್ಮರಣೀಯಗೊಳಿಸಲು ನಾವು ಇಚ್ಛಿಸುತ್ತೇವೆ’ ಎಂದು ಸಿಎಬಿ ಅಧ್ಯಕ್ಷರಾದ ಸ್ನೇಹಸಿಶ್ ಗಂಗೂಲಿ ಹೇಳಿದ್ದಾರೆ. ‘ವಿರಾಟ್ ಕೊಹ್ಲಿ ಮೈದಾನಕ್ಕೆ ನಡೆದು ಬರುವಾಗ ಕ್ರೀಡಾಂಗಣದಲ್ಲಿರುವ ಪ್ರತಿಯೊಬ್ಬ ಅಭಿಮಾನಿ ಕೊಹ್ಲಿ ಮಾಸ್ಕ್ ಧರಿಸಬೇಕೆಂಬುದು ನಮ್ಮ ಆಶಯವಾಗಿದೆ. ಅದಕ್ಕಾಗಿ ನಾವು ಉಚಿತವಾಗಿ 70,000 ಮಾಸ್ಕ್ ವಿತರಣೆಗೆ ನಿರ್ಧರಿಸಿದ್ದೇವೆ’ ಎಂದೂ ಅವರು ಹೇಳಿದರು. ನವೆಂಬರ್ 2013ರಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ 199ನೇ ಟೆಸ್ಟ್ ಪಂದ್ಯ ಆಡಿದಾಗಲೂ ಈಡನ್ ಗಾರ್ಡನ್‌ನಲ್ಲಿ ಇದೇ ರೀತಿಯ ವಾತಾರಣವಿತ್ತು ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.