ದಕ್ಷಿಣ ಆಫ್ರಿಕಾ ಮಧ್ಯಮ ಕ್ರಮಾಂಕದ ಪ್ರದರ್ಶನ: ಗ್ರೇಮ್ ಸ್ಮಿತ್‌ ಶ್ಲಾಘನೆ ಮುಂಬೈ: ಎದುರಾಳಿ ತಂಡವನ್ನು ಕಂಗೆಡಿಸಬಲ್ಲ ಪ್ರಬಲ ಮಧ್ಯಮ ಕ್ರಮಾಂಕವನ್ನು ಹೊಂದಿರುವುದು ದಕ್ಷಿಣ ಆಫ್ರಿಕಾ ತಂಡದ ಯಶಸ್ಸಿಗೆ ಕಾರಣ ಎಂದು ಆ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ. ‘ನಾಯಕ ತೆಂಬಾ ಬವುಮಾ ಅವರೂ ತಮ್ಮ ಆಟದ ಮಟ್ಟ ಎತ್ತರಿಸಿ, ತಂಡಕ್ಕೆ ಇನ್ನಷ್ಟು ಬಲ ತುಂಬಬೇಕು’ ಎಂದೂ ಹೇಳಿದ್ದಾರೆ. ತಂಡ ಈ ರೀತಿ ನಿರ್ದಯದ ಆಟವಾಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಒಪ್ಪಿಕೊಂಡ ಸ್ಮಿತ್‌, ಈಗಿನ ಸ್ಥಿರ ಮತ್ತು ಪ್ರಾಬಲ್ಯಪೂರ್ಣ ಆಟದಿಂದ ದಕ್ಷಿಣ ಆಫ್ರಿಕಾವು ಪ್ರಶಸ್ತಿಗೆ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ ಎಂದು ಸೋಮವಾರ ಹೇಳಿದರು. ‘ದಕ್ಷಿಣ ಆಫ್ರಿಕಾವು ಬಲಿಷ್ಠ ಮಧ್ಯಮ ಕ್ರಮಾಂಕ ಹೊಂದಿದೆ. ಇಂಥ ಕ್ರಮಾಂಕವನ್ನು ತಂಡ ಹಿಂದೆಂದೂ ಹೊಂದಿರಲಿಲ್ಲ. ನಂ. 4, 5 ಮತ್ತು ಆರನೇ ಸ್ಥಾನದಲ್ಲಿ (ಏಡನ್) ಮರ್ಕರಂ, (ಹೆನ್ರಿಚ್‌) ಕ್ಲಾಸೆನ್ ಮತ್ತು (ಡೇವಿಡ್‌) ಮಿಲ್ಲರ್‌ ಇದ್ದಾರೆ. ಯಾವುದೇ ದಾಳಿಯನ್ನು ಪುಡಿಗಟ್ಟುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಸ್ಪಿನ್ ಕೂಡ ಆಡುವುದರಿಂದ ತಂಡಕ್ಕೆ ದೊಡ್ಡ ಅನುಕೂಲ’ ಎಂದು ಸ್ಮಿತ್ ವಿಶ್ಲೇಷಿಸಿದರು. ‘ಬವುಮಾ ಸಾಕಷ್ಟು ದುಡಿದಿದ್ದಾರೆ. ಆಟದಲ್ಲಿ ಏರಿಳಿತ ಕಂಡಿದ್ದಾರೆ. ತಂಡದಲ್ಲಿ ಈಗ ಸ್ಫೂರ್ತಿ ನೆಲೆಸಿದೆ. ತಂಡ ಈ ವಾತಾವರಣ ಕಾಣಲು ಅವರ ಮತ್ತು ರಾಬ್‌ ವಾಲ್ಟರ್ (ಕೋಚ್) ಅವರ ಶ್ರಮವೂ ಇದೆ’ ಎಂದು ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.