ಲಂಕಾಗೆ ಆಘಾತ ನೀಡುವುದೇ ಅಫ್ಗನ್? ಪುಣೆ: ಈ ಸಲದ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸಿರುವ ಅಫ್ಗಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸೋಮವಾರ ಮುಖಾಮುಖಿಯಾಗಲಿವೆ. ಏಷ್ಯಾ ಖಂಡದ ಈ ಎರಡೂ ತಂಡಗಳು ಸಮಬಲದ ಹೋರಾಟ ನಡೆಸುವ ನಿರೀಕ್ಷೆ ಗರಿಗೆದರಿದೆ. ನಾಲ್ಕರ ಹಂತಕ್ಕೆ ಪ್ರವೇಶಿಸುವ ಕನಸು ಜೀವಂತವಾಗುಳಿಯಬೇಕಾದರೆ ಎರಡೂ ತಂಡಗಳಿಗೂ ಈ ಪಂದ್ಯದಲ್ಲಿ ಗೆಲ್ಲುವುದು ಮುಖ್ಯವಾಗಿದೆ. ಅಂಕಪಟ್ಟಿಯಲ್ಲಿ ಶ್ರೀಲಂಕಾ ಐದು ಅಫ್ಗಾನಿಸ್ತಾನ ಏಳನೇ ಸ್ಥಾನದಲ್ಲಿದೆ. ಲಂಕಾ ತಂಡವು ಕಳೆದ ಎರಡೂ ಪಂದ್ಯಗಳಲ್ಲಿ ಜಯಿಸಿದೆ. ಅದಕ್ಕಿಂತ ಮೊದಲು ಮೂರು ಪಂದ್ಯಗಳಲ್ಲಿ ಸತತ ಸೋಲನುಭವಿಸಿತ್ತು. ಆದರೆ ಈಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಅಮೋಘ ಬೌಲಿಂಗ್ ಮಾಡಿದ್ದ ಲಹೀರು ಕುಮಾರ ಗಾಯಗೊಂಡಿದ್ದಾರೆ. ಆದ್ದರಿಂದ ಅವರಿಲ್ಲದೇ ತಂಡವು ಕಣಕ್ಕಿಳಿಯಬೇಕಿದೆ. ಅನುಭವಿ ಏಂಜೆಲೊ ಮ್ಯಾಥ್ಯೂಸ್ ತಂಡಕ್ಕೆ ಮರಳಿದ್ದಾರೆ. ಇದರಿಂದಾಗಿ ಬೌಲಿಂಗ್ ವಿಭಾಗದ ಬಲ ಹೆಚ್ಚಿದಂತಾಗಿದೆ. ಮಧುಶಂಕಾ ಕೂಡ ಫಾರ್ಮ್‌ನಲ್ಲಿದ್ದಾರೆ. ಪಥುಮ್ ನಿಸಾಂಕ, ಮೆಂಡಿಸ್, ಸದೀರ ಸಮರವಿಕ್ರಮ ಅವರು ಉತ್ತಮ ಲಯದಲ್ಲಿರುವುದರಿಂದ ಬ್ಯಾಟಿಂಗ್‌ ವಿಭಾಗ ಚೆನ್ನಾಗಿದೆ. ಆದರೆ ಇದೇ ಟೂರ್ನಿಯಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳಿಗೆ ಆಘಾತ ನೀಡಿರುವ ಹಷ್ಮತ್‌ವುಲ್ಲಾ ಶಹೀದಿ ಬಳಗವೂ ಕಠಿಣ ಸವಾಲು ಒಡ್ಡುವ ಸಾಮರ್ಥ್ಯ ಹೊಂದಿದೆ. ಕೊನೆಯ ಹಂತದವರೆಗೂ ಹೋರಾಟ ಮಾಡುವ ಮನೋಭಾ ತಂಡದ ಆಟಗಾರರಲ್ಲಿರುವುದು ವಿಶೇಷ. ಬೌಲರ್‌ಗಳಲ್ಲಿ ನವೀನ್ ಉಲ್ ಹಕ್, ನೂರ್ ಅಹಮದ್ ಹಾಗೂ ಅನುಭವಿ ಸ್ಪಿನ್ನರ್ ರಶೀದ್ ಖಾನ್ ಅವರು ಲಂಕಾ ಬ್ಯಾಟರ್‌ಗಳಿಗೆ ಸವಾಲೊಡ್ಡಬಲ್ಲ ಸಮರ್ಥರು. ಪಾಕ್ ಪಂದ್ಯದ ಎದುರು ಅರ್ಧಶತಕಗಳನ್ನು ದಾಖಲಿಸಿದ್ದ ರೆಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್ ಮತ್ತು ರೆಹಮತ್ ಶಾ ಅವರು ಬೌಲರ್‌ಗಳಿಗೆ ತಲೆನೋವಾಗಬಲ್ಲರು. ಆದ್ದರಿಂದ ಲಂಕಾ ತಂಡವು ಯಾವುದೇ ಹಂತದಲ್ಲಿಯೂ ಮೈಮರೆಯುವಂತಿಲ್ಲ. ಈ ಹಿಂದೆ ಏಕದಿನ ಕ್ರಿಕೆಟ್‌ ನಲ್ಲಿ ಉಭಯ ತಂಡಗಳು 11 ಬಾರಿ ಸೆಣಸಾಡಿವೆ. ಅದರಲ್ಲಿ ಅಫ್ಗಾನಿಸ್ತಾನವು ಮೂರು ಪಂದ್ಯಗಳಲ್ಲಿ ಗೆದ್ದಿದೆ. ಉಳಿದಿದ್ದರಲ್ಲಿ ಸೋತಿದೆ. ತಂಡಗಳು ಶ್ರೀಲಂಕಾ: ಕುಸಲ ಮೆಂಡಿಸ್ (ನಾಯಕ), ಕುಸಲ ಪೆರೆರಾ, ಪಥುಮ್ ನಿಸಾಂಕ, ದುಷ್ಮಂತಾ ಚಾಮೀರಾ, ದಿಮುತ ಕರುಣಾರತ್ನೆ, ಸದೀರಾ ಸಮರವಿಕ್ರಮ, ಚರಿತ ಅಸಲಂಕಾ, ಧನಂಜಯ ಡಿಸಿಲ್ವಾ, ಮಹೀಷ ತೀಕ್ಷಣ, ದುನಿತ್ ವೆಲಾಳಗೆ, ಕಸುನ್ ರಜಿತಾ, ಏಂಜೆಲೊ ಮ್ಯಾಥ್ಯೂಸ್, ದಿಲ್ಶಾನ್ ಮಧುಶಂಕಾ, ದುಶಾನ್ ಹೇಮಂತ, ಚಾಮಿಕಾ ಕರುಣರತ್ನೆ. ಅಫ್ಗಾನಿಸ್ತಾನ: ಹಷ್ಮತ್‌ವುಲ್ಲಾ ಶಹೀದಿ (ನಾಯಕ), ರೆಹಮಾನುಲ್ಲಾ ಗುರ್ಬಾಜ್ (ವಿಕೆಟ್‌ಕೀಪರ್), ಇಬ್ರಾಹಿಂ ಜದ್ರಾನ್, ರಿಯಾಜ್ ಹಸನ್, ರೆಹಮತಾ ಶಾ, ನಜೀಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಕಿಲ್ (ವಿಕೆಟ್‌ಕೀಪರ್‌), ಅಜ್ಮತ್‌ವುಲ್ಲಾ ಒಮರ್‌ಝೈ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನೂರ್ ಅಹಮದ್, ಫಜಲ್‌ಹಕ್ ಫಾರೂಕಿ, ಅಬ್ದುಲ್ ರೆಹಮಾನ್, ನವೀನ್ ಉಲ್ ಹಕ್. ಪಂದ್ಯ ಆರಂಭ: ಮಧ್ಯಾಹ್ನ 2 ಸ್ಪಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಆ್ಯಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.