2023 | : ಸೋಲಿನ ಸರಪಳಿ ಕಡಿಯಲು ಪಾಕ್ ಯತ್ನ ಕೋಲ್ಕತ್ತ: ಸೆಮಿಫೈನಲ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿರುವ ಪಾಕಿಸ್ತಾನ ತಂಡ, ಹಾಲಿ ವಿಶ್ವಕಪ್‌ ಟೂರ್ನಿಯಲ್ಲಿ ಸೋಲುಗಳ ಸರಣಿಯಿಂದ ಹೊರಬರಲು ತನ್ನೆಲ್ಲಾ ಪ್ರಯತ್ನ ನಡೆಸುತ್ತಿದೆ. ಪಾಕ್ ತಂಡ ಈಡನ್‌ ಗಾರ್ಡನ್‌ನಲ್ಲಿ ಮಂಗಳವಾರ ನಡೆಯುವ ಪಂದ್ಯದಲ್ಲಿ ಇನ್ನೊಂದು ಸಮಾನದುಃಖಿ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಪಾಕ್‌ ತಂಡ ಆರು ಪಂದ್ಯಗಳನ್ನಾಡಿದ್ದು ಎರಡರಲ್ಲಿ ಮಾತ್ರ ಜಯಗಳಿಸಿದ್ದು ಕೇವಲ ನಾಲ್ಕು ಪಾಯಿಂಟ್ಸ್‌ ಸಂಗ್ರಹಿಸಿದೆ. ಇನ್ನು ಹೆಚ್ಚೆಂದರೆ ಆ ತಂಡ ಉಳಿದ ಮೂರೂ ಪಂದ್ಯ ಗೆದ್ದರೆ ಗರಿಷ್ಠ 10 ಪಾಯಿಂಟ್ಸ್‌ವರೆಗೆ ತಲುಪಬಹುದು. ಇದರ ಜೊತೆಗೆ, ಇತರ ತಂಡಗಳ ಫಲಿತಾಂಶದಲ್ಲಿ ಏರುಪೇರುಗಳಾಗಿ ಪಾಕ್ ಉತ್ತಮ ರನ್‌ರೇಟ್‌ನೊಡನೆ ಸೆಮಿಫೈನಲ್ ತಲುಪಿದಲ್ಲಿ ಅದು ಪವಾಡ ಆಗಬಲ್ಲದಷ್ಟೇ. ಈಗಿನ ಸನ್ನಿವೇಶದಲ್ಲಿ ಭಾರತ, ದಕ್ಷಿಣ ಆಫ್ರಿಕಾ ತಂಡಗಳ ಹಾದಿ ಸುಗಮವಾಗಿದ್ದು, ಫಾರ್ಮ್‌ ಪ್ರಕಾರ ಮೇಲ್ನೋಟಕ್ಕೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಕೂಡ ಸೆಮಿಫೈನಲ್ ತಲುಪುವ ನೆಚ್ಚಿನ ತಂಡಗಳಾಗಿ ಕಾಣುತ್ತಿವೆ. ಬಾಂಗ್ಲಾದೇಶ ಎದುರು ಸೋಲು ಎದುರಾದರೆ ಪಾಕ್‌ ತಂಡದ ಸೆಮಿಫೈನಲ್ ಬಾಗಿಲು ಅಕ್ಷರಶಃ ಮುಚ್ಚಿದಂತೆ. ಹೀಗಾಗಿ ಗೆಲುವಿಗೆ ಆ ತಂಡ ತನ್ನೆಲ್ಲಾ ಶ್ರಮಹಾಕುವುದು ಖಚಿತ. ಪಾಕ್ ತಂಡಕ್ಕೆ ಕೈಕೊಟ್ಟಿರುವುದು ಬ್ಯಾಟಿಂಗ್‌. ಕೆಲವು ಪಂದ್ಯಗಳಲ್ಲಿ ಅದರ ಬೌಲಿಂಗ್‌ ಪರಿಣಾಮಕಾರಿ ಆಗಿದೆ. ಈಡನ್ ಗಾರ್ಡನ್ ಪಿಚ್ ವೇಗಿಗಳಿಗೆ ನೆರವು ನೀಡುವ ನಿರೀಕ್ಷೆಯಿದ್ದು, ಶಹೀನ್ ಶಾ ಅಫ್ರೀದಿ, ಹ್ಯಾರಿಸ್‌ ರವೂಫ್ ಮತ್ತು ಹೊಸಬ ಮೊಹಮ್ಮದ್ ವಾಸಿಂ ಜೂನಿಯರ್ ಅವರಿಂದ ತಂಡ ಉತ್ತಮ ಪ್ರದರ್ಶನ ನಿರೀಕ್ಷಿಸಿದೆ. ವೇಗದ ಬೌಲರ್ ಹಸನ್ ಅಲಿ ಬದಲು ಅವಕಾಶ ಪಡೆದ ವಾಸಿಂ ಜೂನಿಯರ್ ದಕ್ಷಿಣ ಆಫ್ರಿಕಾ ವಿರುದ್ಧ ಈ ಹಿಂದಿನ ಪಂದ್ಯದಲ್ಲಿ ಗಮನ ಸೆಳೆದಿದ್ದಾರೆ. ಆದರೆ ಬ್ಯಾಟರ್‌ಗಳಿಂದ ಸಾಂಘಿಕ ಪ್ರದರ್ಶನ ಬರುತ್ತಿಲ್ಲ. ಹೆಚ್ಚಿನ ಪಂದ್ಯಗಳಲ್ಲಿ ಆ ತಂಡ ಪೂರ್ಣ 50 ಓವರುಗಳನ್ನು ಆಡಲೂ ವಿಫಲವಾಗಿದೆ. ನಾಯಕ ಬಾಬರ್‌ ಆಜಂ ಸ್ವತಃ ಉತ್ತಮ ಆರಂಭ ಪಡೆದರೂ, ಅವುಗಳನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುತ್ತಿಲ್ಲ. ಅವರು ಮೂರು ಅರ್ಧ ಶತಕ ಹೊಡೆದಿದ್ದಾರೆ. ಇನ್ನೊಂದೆಡೆ, ಬಾಂಗ್ಲಾ ತಂಡದಲ್ಲಿ ಎಲ್ಲವೂ ಸರಿಯಿಲ್ಲ. ಆ ತಂಡದ ಬ್ಯಾಟರ್‌ಗಳು ದೊಡ್ಡ ಮೊತ್ತ ಗಳಿಸುತ್ತಿಲ್ಲ. ಕ್ರಿಕೆಟ್‌ ಶಿಶುಗಳಾದ ನೆದರ್ಲೆಂಡ್ಸ್ ವಿರುದ್ಧ ಪಂದ್ಯದಲ್ಲಿ ಅದರ ಅಗ್ರ ಆರು ಬ್ಯಾಟರ್‌ಗಳು ಎರಡಂಕಿ ಮೊತ್ತವನ್ನೂ ಗಳಿಸಲು ವಿಫಲರಾಗಿದ್ದರು. 230 ರನ್‌ಗಳ ಗುರಿ ಬೆಂಬತ್ತಿದ್ದ ಬಾಂಗ್ಲಾ ಹುಲಿಗಳು ಬೆಕ್ಕಿನಂತೆ ಆಗಿ 142 ರನ್‌ಗಳಿಗೆ ಉರುಳಿದ್ದರು. ಅದು ತಂಡಕ್ಕೆ ಸತತ ಐದನೇ ಸೋಲು ಆಗಿತ್ತು. ಆರು ಪಂದ್ಯಗಳಿಂದ ಎರಡು ಪಾಯಿಂಟ್ಸ್‌ ಸಂಗ್ರಹಿಸಿರುವ ಶಕಿಬ್ ಅಲ್‌ ಹಸನ್ ಪಡೆ 10 ತಂಡಗಳ ಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. ಪಂದ್ಯ ಆರಂಭ: ಮಧ್ಯಾಹ್ನ 2.00 ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.