2023: ಅಫ್ಗನ್ ಗೆಲುವಿಗೆ 180 ರನ್ ಗುರಿ ನೀಡಿದ ನೆದರ್ಲೆಂಡ್ಸ್ ಲಖನೌ: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಶುಕ್ರವಾರ) ನೆದರ್ಲೆಂಡ್ಸ್ ಮತ್ತು ಅಫ್ಗಾನಿಸ್ತಾನ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ. ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅಫ್ಗನ್ ವಿರುದ್ಧ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ 46.3 ಓವರ್‌ಗಳಲ್ಲಿ 179 ರನ್ ಗಳಿಸಿ ಆಲೌಟ್ ಆಗಿದೆ. ಸೈಬ್ರಾಂಡ್‌ ಇಂಗೆಲ್‌ಬ್ರೆಕ್ಟ್‌ 58, ಮ್ಯಾಕ್ಸ್‌ ಒ ಡೌಡ್‌ 42, ಕಾಲಿನ್‌ ಆ್ಯಕರ್‌ಮನ್ 29 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಅಫ್ಗನ್ ಪರ ಮೊಹಮ್ಮದ್ ನಬಿ 3, ನೂರ್ ಅಹ್ಮದ್ 2, ಮುಜೀಬ್ ಉರ್‌ ರಹಮಾನ್ ಒಂದು ವಿಕೆಟ್ ಪಡೆದಿದ್ದಾರೆ. ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಘಟಾನುಘಟಿಗಳಿಗೆ ಆಘಾತ ನೀಡುವ ಮೂಲಕ ಉಭಯ ತಂಡಗಳು ಗಮನ ಸೆಳೆದಿವೆ. ಹಷ್ಮತ್‌ವುಲ್ಲಾ ಶಹೀದಿ ನಾಯಕತ್ವದ ಅಫ್ಗನ್ ತಂಡವು ಆಡಿರುವ 6 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು, ಮೂರರಲ್ಲಿ ಸೋತಿದೆ. ಇದರಿಂದಾಗಿ ಆರನೇ ಸ್ಥಾನ ದಲ್ಲಿದೆ. ಸೆಮಿಫೈನಲ್‌ಗೆ ಪ್ರವೇಶಿಸುವ ಅಲ್ಪ ಅವಕಾಶ ಇನ್ನೂ ಈ ತಂಡಕ್ಕೆ ಇದೆ. ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಎದುರು ಜಯಿಸಿರುವ ನೆದರ್ಲೆಂಡ್ಸ್‌ ತಂಡವು ಎಂಟನೇ ಸ್ಥಾನದಲ್ಲಿದೆ. ನಾಲ್ಕರ ಘಟ್ಟಕ್ಕೆ ಹೋಗುವ ಅವಕಾಶ ಈ ತಂಡಕ್ಕೆ ಕಡಿಮೆ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.