ದಕ್ಷಿಣ ಆಫ್ರಿಕಾ ಎದುರು ಪಾಕ್‌ಗೆ ಸೋಲು: ಶಮ್ಸಿ ನಾಟ್‌ಔಟ್ ನಿರ್ಣಯಕ್ಕೆ ಅಸಮಾಧಾನ ಬೆಂಗಳೂರು: ಕ್ರಿಕೆಟ್ ಪಂದ್ಯಗಳಲ್ಲಿ ಅಂಪೈರ್‌ಗೆ ನೀಡಲಾಗಿರುವ ಸ್ವಯಂಪ್ರೇರಿತ ಮರುಪರಿಶೀಲನಾ ಹಕ್ಕು ರದ್ದುಗೊಳಿಸಬೇಕು ಎಂದು ಪಾಕಿಸ್ತಾನ ಕ್ರಿಕೆಟಿಗ ಮಿಸ್ಬಾ ಉಲ್ ಹಕ್ ಒತ್ತಾಯಿಸಿದ್ದಾರೆ. ಚೆನ್ನೈನಲ್ಲಿ ಶುಕ್ರವಾರ ರೋಚಕ ಅಂತ್ಯ ಕಂಡ ವಿಶ್ವಕಪ್ ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ದಕ್ಷಿಣ ಆಫ್ರಿಕಾ ತಂಡದ ಕೊನೆಯ ಬ್ಯಾಟರ್ ತಬ್ರೇಜ್ ಶಮ್ಸಿ ಅವರ ಎಲ್‌ಬಿಡಬ್ಲ್ಯು ಅಪೀಲ್‌ಗೆ ನಾಟ್‌ಔಟ್ ನೀಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಆದರೆ ಅಂಪೈರ್‌ ಗಳು ನಾಟ್‌ಔಟ್ ನೀಡಿದ್ದನ್ನು ಪಾಕಿಸ್ತಾನ ತಂಡವು ಯುಡಿಆರ್‌ಎಸ್‌ನಲ್ಲಿ ಮರುಪರಿಶೀಲನೆಗೆ ಮನವಿ ಸಲ್ಲಿಸಿತ್ತು. ಮೂರನೇ ಅಂಪೈರ್ ಮರುಪರಿಶೀಲನೆ ಮಾಡಿ ನಾಟ್‌ಔಟ್ ನೀಡಿದ್ದರು. ನಂತರ ದಕ್ಷಿಣ ಆಫ್ರಿಕಾ ತಂಡವು 1 ವಿಕೆಟ್ ಜಯ ಗಳಿಸಿತ್ತು. ಪಾಕ್ ತಂಡಕ್ಕೆ ಸೆಮಿಫೈನಲ್ ಅವಕಾಶ ಜೀವಂತವಾಗುಳಿಯಲು ಈ ಪಂದ್ಯದಲ್ಲಿ ಜಯಗಳಿಸುವ ಅಗತ್ಯವಿತ್ತು. ಈ ಬಗ್ಗೆ ಎಕ್ಸ್‌ (ಟ್ವಿಟರ್‌)ನಲ್ಲಿ ಮಿಸ್ಬಾ, ದಕ್ಷಿಣ ಆಫ್ರಿಕಾದ ಗ್ರೆಮ್ ಸ್ಮಿತ್ ಮತ್ತು ಭಾರತದ ಹರಭಜನ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಕೆಟ್ಟ ಅಂಪೈರಿಂಗ್ ಮತ್ತು ದೋಷಯುಕ್ತ ನಿಯಮಗಳಿಂದಾಗಿ ಪಾಕಿಸ್ತಾನ ಸೋತಿತು. ಐಸಿಸಿಯು ಈ ನಿಯಮ ಬದಲಿಸಲು ಕ್ರಮ ಕೈಗೊಳ್ಳಬೇಕು. ಚೆಂಡು ಸ್ಟಂಪ್‌ಗೆ ನೇರವಾಗಿದ್ದರೂ ಅಂಪೈರ್‌ಗಳೂ ಔಟ್ ಕೊಟ್ಟಿಲ್ಲ. ಇನ್ನು ತಂತ್ರಜ್ಞಾನದ ಅವಶ್ಯಕತೆಯಾದರೂ ಏನು?‘ ಎಂದು ಹರಭಜನ್ ಹೇಳಿದ್ದಾರೆ. ‘ಈ ಹಂತದಲ್ಲಿ ನಿಯಮ ಬದಲಾವಣೆ ಸಾಧ್ಯವಿಲ್ಲ. ಡಿಆರ್‌ಎಸ್ ಇರುವುದು ಅಂಪೈರ್‌ಗಳನ್ನು ಬದಲಾಯಿಸಲು ಅಲ್ಲ. ಅಂಪೈರ್‌ಗಳ ಕಾರ್ಯಕ್ಷಮತೆಯನ್ನು ಉತ್ಕೃಷ್ಟಗೊಳಿಸಲು ಇದೆ. ಈ ಪದ್ಧತಿ ಜಾರಿಯಾಗುವ ಮುನ್ನ ಹಲವಾರು ಬಾರಿ ಪರೀಕ್ಷೆಗೆ ಒಳಗಾಗಿದೆ’ ಎಂದು ಡಿಆರ್‌ಎಸ್‌ ಸಂಬಂಧಿತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.