: - ಸೆಮಿಫೈನಲ್ ಮೇಲೆ ಅಫ್ಗಾನಿಸ್ತಾನ ಕಣ್ಣು ಮುಂಬೈ: 'ದೈತ್ಯ ಸಂಹಾರಿ’ ಅಫ್ಗಾನಿಸ್ತಾನ ತಂಡವನ್ನು ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಎದುರಿಸಲಿದೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡವು ಅಫ್ಗನ್ ವಿರುದ್ಧ ಗೆದ್ದು ನಾಲ್ಕರ ಘಟ್ಟದ ಪ್ರವೇಶವನ್ನು ಖಚಿತಪಡಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಇನ್ನೊಂದೆಡೆ ಅಫ್ಗನ್ ತಂಡವೂ ಟೂರ್ನಿಯಲ್ಲಿ ತನ್ನ ಐದನೇ ಜಯವನ್ನು ದಾಖಲಿಸಿ ಸೆಮಿಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ. ಇದುವರೆಗೆ ಏಳು ಪಂದ್ಯಗಳನ್ನು ಆಡಿರುವ ಅಷ್ಮತ್‌ವುಲ್ಲಾ ಶಹೀದಿ ಬಳಗವು ಮೂರರಲ್ಲಿ ಸೋತಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್, ಮಾಜಿ ಚಾಂಪಿಯನ್ ತಂಡಗಳಾದ ಪಾಕಿಸ್ತಾನ, ಶ್ರೀಲಂಕಾ ಮತ್ತು ಉದಯೋನ್ಮುಖ ಬಳಗ ನೆದರ್ಲೆಂಡ್ಸ್‌ ವಿರುದ್ಧ ಗೆದ್ದಿತ್ತು. ಅದರಿಂದಾಗಿ ತಂಡವು ಆತ್ಮವಿಶ್ವಾಸದ ಉತ್ತುಂಗದಲ್ಲಿದೆ. ಅನುಭವಿ ಸ್ಪಿನ್ನರ್‌ಗಳಾದ ರಶೀದ್ ಖಾನ್, ಮೊಹಮ್ಮದ್ ನಬಿ ಹಾಗೂ ನೂರ್ ಅಹಮದ್ ಅವರು ಪಂದ್ಯ ಗೆಲ್ಲಿಸಿಕೊಡಬಲ್ಲ ಸಮರ್ಥರಾಗಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಿಚೆಲ್ ಮಾರ್ಷ್ ಅವರ ಗೈರುಹಾಜರಿಯಿಂದಾಗಿ ತುಸು ದುರ್ಬಲಗೊಂಡಿರುವ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕಕ್ಕೆ ಮತ್ತಷ್ಟು ಪೆಟ್ಟು ಕೊಡುವ ಯೋಜನೆಯಲ್ಲಿದ್ದಾರೆ. ಆದರೆ ಆರಂಭಿಕ ಜೋಡಿ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ಅವರನ್ನು ಕಟ್ಟಿಹಾಕದೇ ಹೋದರೆ ಅಫ್ಗನ್ ಬೌಲರ್‌ಗಳು ‘ದುಬಾರಿ’ ಆಗುವುದು ಖಚಿತ. ವಾಂಖೆಡೆ ಕ್ರೀಡಾಂಗಣದ ಪಿಚ್‌ನಲ್ಲಿ ನಡೆದಿರುವ ಈ ಹಿಂದಿನ ಪಂದ್ಯಗಳಲ್ಲಿ ರನ್‌ಗಳು ಹರಿದಿವೆ. ಚಾಣಾಕ್ಷತೆಯಿಂದ ಬೌಲಿಂಗ್ ಮಾಡುವ ಬೌಲರ್‌ಗಳಿಗೂ ಇಲ್ಲಿ ಫಲ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಪ್ಯಾಟ್ ಕಮಿನ್ಸ್ ಬಳಗವು ಮೊದಲೆರಡು ಪಂದ್ಯಗಳನ್ನು ಸೋತು ಪುಟಿದೆದ್ದ ರೀತಿ ಅಮೋಘವಾಗಿದೆ. ಸತತ ಐದು ಪಂದ್ಯಗಳನ್ನು ಗೆದ್ದಿದೆ. ವಿಜಯದ ಓಟವನ್ನು ಮುಂದುವರಿಸುವ ಛಲದಲ್ಲಿದೆ. ತಂಡಗಳು ಆಸ್ಟ್ರೇಲಿಯಾ: ಪ್ಯಾಟ್ ಕಮಿನ್ಸ್ (ನಾಯಕ), ಜೋಷ್‌ ಇಂಗ್ಲಿಷ್, ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಾರ್ನಸ್ ಲಾಬುಷೇನ್, ಕ್ಯಾಮರಾನ್ ಗ್ರೀನ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ಟಾರ್ಕ್, ಆ್ಯಡಂ ಜಂಪಾ, ಜೋಷ್ ಹ್ಯಾಜಲ್‌ವುಡ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸೀನ್ ಅಬಾಟ್, ಅಲೆಕ್ಸ್ ಕ್ಯಾರಿ ಅಫ್ಗಾನಿಸ್ತಾನ: ಹಷ್ಮತ್‌ವುಲ್ಲಾ ಶಹೀದಿ (ನಾಯಕ), ಇಕ್ರಂ ಅಲಿಖಿಲ್ (ವಿಕೆಟ್‌ಕೀಪರ್), ರೆಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರೆಹಮತ್ ಶಾ, ಅಜ್ಮತ್‌ವುಲ್ಲಾ ಒಮರ್‌ಝೈ, ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ಫಜಲ್‌ಹಕ್ ಫರೂಕಿ, ನೂರ್ ಅಹಮದ್, ನಜೀಬುಲ್ಲಾ ಜದ್ರಾನ್, ನವೀನ್ ಉಲ್ ಹಕ್, ಅಬ್ದುಲ್ ರೆಹಮಾನ್, ರಿಯಾಜ್ ಹಸನ್. ಪಂದ್ಯ ಆರಂಭ: ಮಧ್ಯಾಹ್ನ 2 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಹಾಟ್‌ಸ್ಟಾರ್ ಆ್ಯಪ್. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.