2023: ದಕ್ಷಿಣ ಆಫ್ರಿಕಾಕ್ಕೆ ಇಂದು ನ್ಯೂಜಿಲೆಂಡ್‌ ಸವಾಲು ಪುಣೆ: ಒಂದು ತಂಡ ಕೊನೆಯ ಎಸೆತದವರೆಗೆ ಬೆಳೆದ ರೋಚಕ ಪಂದ್ಯದಲ್ಲಿ ನಿರಾಸೆ ಅನುಭವಿಸಿದರೆ, ಇನ್ನೊಂದು ತಂಡ, ಕೊನೆಗಳಿಗೆಯಲ್ಲಿ ಹಾಗೂಹೀಗೂ ಗೆದ್ದು ನಿಟ್ಟುಸಿರು ಬಿಟ್ಟಿತ್ತು. ಸೆಮಿಫೈನಲ್ ರೇಸ್‌ನಲ್ಲಿರುವ ನ್ಯೂಜಿಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಕಥೆ ಇದು. ಬುಧವಾರ ಇಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಇವೆರಡು ತಂಡಗಳು ಮುಖಾಮುಖಿಯಾಗಲಿದ್ದು ಉತ್ತಮ ಹೋರಾಟ ನಿರೀಕ್ಷಿಸಲಾಗಿದೆ. ಹಾಲಿ ವಿಶ್ವಕಪ್‌ನಲ್ಲಿ ಬಹುತೇಕ ಪಂದ್ಯಗಳು ಸಪ್ಪೆಯಾಗಿದ್ದ ಸಂದರ್ಭದಲ್ಲಿ, ಮೇಲಿನ ಎರಡು ಪಂದ್ಯಗಳು ಕ್ರಿಕೆಟ್‌ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದವು. ಕಳೆದ ವಾರ, ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾ ರೋಚಕ ಪಂದ್ಯದಲ್ಲಿ ಒಂದು ವಿಕೆಟ್‌ ಅಂತರದಿಂದ ಪಾಕಿಸ್ತಾನ ತಂಡವನ್ನು ಸೋಲಿಸಿದರೆ, ಧರ್ಮಶಾಲಾದಲ್ಲಿ ಆಸ್ಟ್ರೇಲಿಯಾ ಎಸೆದಿದ್ದ 388 ರನ್‌ ಸವಾಲಿಗೆ ಸವ್ವಾಸೇರು ಎನ್ನುವಂತೆ ಆಡಿದ್ದ ನ್ಯೂಜಿಲೆಂಡ್‌ ಬರೇ ಐದು ರನ್‌ಗಳ ಅಂತರದಿಂದ ಸೋತಿತ್ತು. ನ್ಯೂಜಿಲೆಂಡ್‌ 6 ಪಂದ್ಯಗಳಿಂದ 8 ‍ಪಾಯಿಂಟ್ಸ್‌ ಸಂಗ್ರಹಿಸಿದೆ. ನಾಲ್ಕು ಸತತ ಗೆಲುವಿನ ನಂತರ ಅದು ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಈಗ ಮತ್ತೊಂದು ಪಂದ್ಯದಲ್ಲಿ ಹಿನ್ನಡೆ ಕಂಡರೆ, ಅಫ್ಗಾನಿಸ್ತಾನ (6 ಪಾಯಿಂಟ್‌) ಮತ್ತು ಪಾಕಿಸ್ತಾನ (4 ಪಾಯಿಂಟ್‌) ತಂಡಗಳಿಗೆ ಕ್ಷೀಣ ಅವಕಾಶ ಒದಗಲಿದೆ. ಇನ್ನೊಂದೆಡೆ ದಕ್ಷಿಣ ಆಫ್ರಿಕಾ 6 ಪಂದ್ಯಗಳಿಂದ 10 ಪಾಯಿಂಟ್ಸ್‌ ಗಳಿಸಿ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಬುಧವಾರದ ಪಂದ್ಯ ಗೆದ್ದರೆ ಅದರ ಸೆಮಿಫೈನಲ್ ಸ್ಥಾನ ಗಟ್ಟಿಯಾಗಲಿದೆ. ಎರಡೂ ತಂಡಗಳು ಬ್ಯಾಟಿಂಗ್‌ನಲ್ಲಿ ಪ್ರಭಾವಶಾಲಿ ಪ್ರದರ್ಶನ ನೀಡಿವೆ. ಹೀಗಾಗಿ ಇದು ಬ್ಯಾಟರ್‌ಗಳ ಮೇಲಾಟವಾಗುವ ಸಾಧ್ಯತೆಯಿದೆ. ಆದರೆ ಗಹುಂಜೆಯಲ್ಲಿರುವ ಎಂಸಿಎ ಕ್ರೀಡಾಂಗಣದ ಪಿಚ್‌ ಬ್ಯಾಟರ್‌ಗಳ ಜೊತೆ ಸ್ಪಿನ್ನರ್‌ಗಳಿಗೂ ಸಾಕಷ್ಟು ನೆರವು ನೀಡುತ್ತಿದೆ. ಶ್ರೀಲಂಕಾ ವಿರುದ್ಧ ಅಫ್ಗಾನಿಸ್ತಾನದ ಸ್ಪಿನ್ನರ್‌ಗಳು ಮಿಂಚಿ ಏಳು ವಿಕೆಟ್‌ ಗೆಲುವು ಪಡೆದಿದ್ದನ್ನು ಮರೆಯುವಂತಿಲ್ಲ. ದಕ್ಷಿಣ ಆಫ್ರಿಕಾದ ಅನುಭವಿ ಕ್ವಿಂಟನ್ ಡಿ ಕಾಕ್ ಮೂರು ಶತಕಗಳನ್ನು ಬಾರಿಸಿದ್ದು, 431 ರನ್‌ಗಳೊಡನೆ ಬ್ಯಾಟರ್‌ಗಳ ಯಾದಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಯಾವುದೇ ದಾಳಿಯನ್ನು ದಂಡಿಸುವ ಛಾತಿ ಅವರಲ್ಲಿದೆ. ನ್ಯೂಜಿಲೆಂಡ್ ಕಡೆ ಎಡಗೈ ಬ್ಯಾಟರ್‌ ರಚಿನ್ ರವೀಂದ್ರ (406 ರನ್) ಅವರ ಮೇಲೆ ಎಲ್ಲರ ಗಮನ ನೆಟ್ಟಿದೆ. ಅವರೂ ಈ ವಿಶ್ವಕಪ್‌ನಲ್ಲಿ ರನ್‌ ಹರಿಸಿದ್ದಾರೆ. ಅವರು ಚೆಂಡನ್ನು ಬೌಂಡರಿಗಳಿಗೆ ಚಿಮ್ಮಿಸುವ ರೀತಿ (ಏರಿಯಲ್ ಹೊಡೆತ) ಆಕರ್ಷಕವಾಗಿದೆ. ದಕ್ಷಿಣ ಆಫ್ರಿಕಾ ತಂಡದಲ್ಲಿ ಹೆನ್ರಿಚ್‌ ಕ್ಲಾಸೆನ್ ಅವರು ಬಿರುಸಿನ ಆಟವಾಡಿದರೆ, ನ್ಯೂಜಿಲೆಂಡ್‌ನಲ್ಲಿ ಜಿಮ್ಮಿ ನಿಶಾಮ್ ಅವರೂ ಅಂಥ ಆಟವಾಡಬಲ್ಲ ಸಮರ್ಥರು. ಧರ್ಮಶಾಲಾದಲ್ಲಿ ಅವರ ಆಟ ಆಸ್ಟ್ರೇಲಿಯಾಕ್ಕೆ ಬೆವರಿಳಿಸಿತ್ತು. ದಕ್ಷಿಣ ಆಫ್ರಿಕಾ ತಂಡದಲ್ಲಿ ಡೇವಿಡ್ ಮಿಲ್ಲರ್ ಅವರ ತೋಳ್ಬಲದ ಆಟ ಇದ್ದರೆ, ಕಿವೀಸ್ ಪರ ಡೇರಿಲ್ ಮಿಚೆಲ್ (322) ಇನಿಂಗ್ಸ್‌ಗೆ ವೇಗ ತುಂಬಬಲ್ಲರು. ದಕ್ಷಿಣ ಆಫ್ರಿಕಾ ತಂಡ ಬೌಲಿಂಗ್‌ನಲ್ಲಿ ಕಗಿಸೊ ರಬಾಡ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿದೆ. ಗಾಯಾಳಾದ ಕಾರಣ ಅವರು ಪಾಕ್ ವಿರುದ್ಧ ಪಂದ್ಯದಲ್ಲಿ ಆಡಿರಲಿಲ್ಲ. ಅವರ ಉಪಸ್ಥಿತಿ ಯುವ ಬೌಲರ್‌ಗಳಾದ ಜೆರಾಲ್ಡ್‌ ಕೊಯೆಟ್ಜಿ ಮತ್ತು ಮಾರ್ಕೊ ಜೆನ್ಸೆನ್ ಅವರಿಗೆ ಸ್ಫೂರ್ತಿ ತುಂಬಬಲ್ಲದು. ದಕ್ಷಿಣ ಆಫ್ರಿಕಕ್ಕೆ ಒಂದು ವಿಭಾಗದಲ್ಲಿ ಅನುಕೂಲವಿರುವುದು ಸ್ಪಿನ್‌ನಲ್ಲಿ. ಕೇಶವ ಮಹಾರಾಜ್ ಜೊತೆ ತಬ್ರೇಜ್ ಸಂಶಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನ್ಯೂಜಿಲೆಂಡ್‌ ಸ್ಪಿನ್‌ ವಿಭಾಗದಲ್ಲಿ ಮಿಚೆಲ್‌ ಸ್ಯಾಂಟನರ್ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಿದೆ. ಗ್ಲೆನ್ ಫಿಲಿಪ್ಸ್‌ ಅವರೂ ಈ ವಿಭಾಗದಲ್ಲಿ ತಂಡಕ್ಕೆ ಬಲತುಂಬಬಲ್ಲರು. ಪಂದ್ಯ ಆರಂಭ: ಮಧ್ಯಾಹ್ನ 2.00 ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.