ಕಿವೀಸ್‌ ತಂಡಕ್ಕೆ ಜೆಮಿಸನ್‌ ನವದೆಹಲಿ: ವೇಗದ ಬೌಲರ್ ಕೈಲ್ ಜೆಮಿಸನ್ ಅವರನ್ನು ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ತಂಡದಲ್ಲಿದ್ದ ವೇಗಿ ಮ್ಯಾಟ್ ಹೆನ್ರಿ ಅವರು ಮುಂಂದಿನ ಪಂದ್ಯಗಳಿಗೆ ಲಭ್ಯರಾಗುವುದು ನಿಶ್ಚಿತವಿಲ್ಲ. ಆದ್ದರಿಂದ ಕೈಲ್ ಅವರನ್ನು ತಂಡವು ಕರೆಸಿಕೊಂಡಿದೆ. 6.8 ಅಡಿ ಎತ್ತರದ ಕೈಲ್ ಅವರು ಗುರುವಾರ ಬೆಂಗಳೂರಿಗೆ ಆಗಮಿಸಿದರು. ಅವರು ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ ಎದುರು ಕಣಕ್ಕಿಳಿಯುವ ಸಾಧ್ಯತೆ ಇದೆ. ಇದೇ 9ರಂದು ಬೆಂಗಳೂರಿನಲ್ಲಿಯೇ ಕಿವೀಸ್ ತಂಡವು ಶ್ರೀಲಂಕಾ ಎದುರು ಆಡುವುದು. ‘ಮ್ಯಾಟ್ ಬಲಗಾಲಿನ ಸ್ನಾಯುಸೆಳೆತದಿಂದ ಬಳಲಿದ್ದಾರೆ. ಅವರ ಸ್ಕ್ಯಾನಿಂಗ್ ಮಾಡಲಾಗಿದೆ. ವೈದ್ಯರ ವರದಿಗಾಗಿ ಕಾಯುತ್ತಿದ್ದೇವೆ. . ಆದ್ದರಿಂದ ಅವರು ಪಾಕ್ ಎದುರಿನ ಪಂದ್ಯದಲ್ಲಿ ಆಡುವುದು ಖಚಿತವಾಗಿಲ್ಲ. ಆದ್ದರಿಂದ ಕೈಲ್ ಅವರನ್ನು ಸೇರ್ಪಡೆ ಮಾಡಲಾಗಿದೆ. ಮ್ಯಾಟ್ ವಿಶ್ವದರ್ಜೆಯ ಬೌಲರ್ ಆಗಿದ್ದಾರೆ. ಅವರು ಫಿಟ್ ಆದರೆ ನಮ್ಮ ಬಲ ಹೆಚ್ಚುವುದು’ ಎಂದು ಕಿವೀಸ್ ಬಳಗದ ಮುಖ್ಯ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ. ನ್ಯೂಜಿಲೆಂಡ್ ತಂಡವು ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದದೆ. ನಂತರದ ಮೂರು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದೆ. ಎಂಟು ಅಂಕ ಗಳಿಸಿದೆ. ಆದ್ದರಿಂದ ಮುಂದಿನ ಎರಡೂ ಪಂದ್ಯಗಳಲ್ಲಿ ಗೆಲ್ಲುವುದು ತಂಡಕ್ಕೆ ಮುಖ್ಯವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.