| : ನಿಧಾನಗತಿಯ ಓವರ್‌- ಪಾಕಿಸ್ತಾನ ತಂಡಕ್ಕೆ ದಂಡ ಬೆಂಗಳೂರು: ನ್ಯೂಜಿಲೆಂಡ್‌ ವಿರುದ್ಧ ಶನಿವಾರ ನಡೆದಿದ್ದ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ನಿಧಾನಗತಿಯಲ್ಲಿ ಓವರ್‌ಗಳನ್ನು ಮಾಡಿದ್ದಕ್ಕೆ ಪಾಕಿಸ್ತಾನ ತಂಡದ ಆಟಗಾರರಿಗೆ ಪಂದ್ಯ ಶುಲ್ಕದ ಶೇ 10 ದಂಡ ವಿಧಿಸಲಾಗಿದೆ. ‘ನಿಗದಿಪಡಿಸಿದ ಸಮಯದಲ್ಲಿ ಎರಡು ಓವರ್‌ಗಳನ್ನು ಕಡಿಮೆ ಮಾಡಿದ್ದಕ್ಕೆ, ಐಸಿಸಿ ಮ್ಯಾಚ್‌ ರೆಫರಿ ರಿಚಿ ರಿಚರ್ಡ್ಸನ್ ಅವರು ಬಾಬರ್‌ ಬಳಗಕ್ಕೆ ದಂಡ ವಿಧಿಸಿದೆ’ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ. ‘ಐಸಿಸಿಯ 2.22 ನಿಯಮದ ಪ್ರಕಾರ, ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲವಾದ ಪ್ರತಿ ಓವರ್‌ಗೆ ಆಟಗಾರರಿಗೆ ಪಂದ್ಯ ಶುಲ್ಕದ ಶೇ 5 ದಂಡ ವಿಧಿಸಲಾಗುತ್ತದೆ‘ ಎಂದಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಡಕ್ವರ್ಥ್‌ ಲೂಯಿಸ್‌ ನಿಯಮದಂತೆ ನ್ಯೂಜಿಲೆಂಡ್‌ ತಂಡವನ್ನು 21 ರನ್‌ಗಳಿಂದ ಮಣಿಸಿದ್ದ ಪಾಕಿಸ್ತಾನ, ಸೆಮಿಫೈನಲ್‌ ಪ್ರವೇಶದ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಂಡಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.