| ನಾಯಕ, ಆರಂಭಿಕನಾಗಿ ರೋಹಿತ್ ಶರ್ಮಾ ಅದ್ಭುತ ಆಟ: ರಾಹುಲ್ ದ್ರಾವಿಡ್ ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ, ಆರಂಭಿಕ ಬ್ಯಾಟಿಂಗ್‌ ಜೊತೆಗೆ ನಾಯಕತ್ವದ ಹೊಣೆಯನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ ಎಂದು ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಶ್ಲಾಘಿಸಿದ್ದಾರೆ. ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ ಆಡಿರುವ ಎಂಟೂ ಪಂದ್ಯಗಳಲ್ಲಿ ಗೆದ್ದಿರುವ ಭಾರತ, ನಾಳೆ (ನವೆಂಬರ್ 12 ರಂದು) ನೆದರ್ಲೆಂಡ್ಸ್‌ ವಿರುದ್ಧ ಬೆಂಗಳೂರಿನಲ್ಲಿ ಸೆಣಸಾಟ ನಡೆಸಲಿದೆ. ರೋಹಿತ್‌ ಶರ್ಮಾ, ಬಿರುಸಿನ ಬ್ಯಾಟಿಂಗ್‌ ಮೂಲಕ ತಂಡಕ್ಕೆ ಆರಂಭದಲ್ಲೇ ಮೇಲುಗೈ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರು 8 ಪಂದ್ಯಗಳಿಂದ 1 ಶತಕ, 2 ಅರ್ಧಶತಕ ಸಹಿತ 442 ರನ್ ಕಲೆಹಾಕಿದ್ದಾರೆ. ನೆದರ್ಲೆಂಡ್ಸ್‌ ವಿರುದ್ಧದ ಪಂದ್ಯದ ಮುನ್ನಾದಿನ (ಶನಿವಾರ) ಮಾತನಾಡಿರುವ ರಾಹುಲ್, 'ರೋಹಿತ್ ಖಂಡಿತವಾಗಿಯೂ ನಾಯಕ. ಮೈದಾನದ ಒಳಗೆ ಮತ್ತು ಆಚೆ, ಎರಡೂ ಕಡೆ ಅವರು ಮಾದರಿಯೆಂಬಂತೆ ತಂಡ ಮುನ್ನಡೆಸಿದ್ದಾರೆ' ಎಂದು ಅಭಿಪ್ರಾಯಪಟ್ಟಿದ್ದಾರೆ. 'ಕೆಲವು ಪಂದ್ಯಗಳಲ್ಲಿ ಸವಾಲು ಎದುರಾಗಬಹುದಾಗಿತ್ತು. ಆದರೆ, ರೋಹಿತ್‌ ಬ್ಯಾಟಿಂಗ್‌ ವೇಳೆ ಬಿರುಸಿನ ಆರಂಭ ನೀಡುವ ಮೂಲಕ ಅದ‌ನ್ನು ನಿವಾರಿಸಿದರು. ಉಳಿದ ಬ್ಯಾಟರ್‌ಗಳಿಗೆ ಇದರಿಂದ ನೆರವಾಯಿತು' ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.