ಬಾಂಗ್ಲಾದೇಶ ವೇಗದ ಬೌಲಿಂಗ್ ಕೋಚ್‌ ಹುದ್ದೆ ತ್ಯಜಿಸಲು ಡೊನಾಲ್ಡ್‌ ನಿರ್ಧಾರ ಢಾಕ್ಕಾ: ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಆ್ಯಲನ್ ಡೊನಾಲ್ಡ್‌ ಅವರು ವಿಶ್ವಕಪ್‌ ನಂತರ, ಬಾಂಗ್ಲಾದೇಶ ತಂಡದ ವೇಗದ ಬೌಲಿಂಗ್‌ ಕೋಚ್‌ ಹುದ್ದೆಯನ್ನು ತೊರೆಯಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಳೆದ ಸೋಮವಾರ ನವದೆಹಲಿಯಲ್ಲಿ ನಡೆದ ಪಂದ್ಯದ ವೇಳೆ ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ ಅವರ ‘ಟೈಮ್ಡ್‌ ಔಟ್‌’ ವಿವಾದ ಪ್ರಕರಣದಲ್ಲಿ ಬಾಂಗ್ಲಾ ತಂಡದ ನಾಯಕ ಶಕಿಬ್ ಅಲ್ ಹಸನ್ ಅವರ ಪಾತ್ರವನ್ನು ಡೊನಾಲ್ಡ್‌ ಬಹಿರಂಗವಾಗಿಯೇ ಟೀಕಿಸಿದ್ದರು. ಇದರ ನಂತರ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಜೊತೆ ಅವರ ಸಂಬಂಧ ಹಳಸಿತ್ತು. ಈ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಡೊನಾಲ್ಡ್‌ ಅವರಿಂದ ಲಿಖಿತ ವಿವರಣೆ ಕೇಳಿತ್ತು. ಕೋಚ್‌ ಹುದ್ದೆ ತ್ಯಜಿಸಿ, ತವರಿಗೆ ಹೋಗುವುದಾಗಿ ಡೊನಾಲ್ಡ್‌ ಹೇಳಿರುವುದನ್ನು ಬಾಂಗ್ಲಾದೇಶದ ‘ಡೇಲಿ ಸ್ಟಾರ್‌’ ಪತ್ರಿಕೆ ವರದಿ ಮಾಡಿದೆ. ಡೊನಾಲ್ಡ್‌ ಕಳೆದ ವರ್ಷದ ಮಾರ್ಚ್‌ನಲ್ಲಿ ಬಾಂಗ್ಲಾ ವೇಗದ ಬೌಲಿಂಗ್ ಕೋಚ್ ಆಗಿ ಆಗಿ ನೇಮಕಗೊಂಡಿದ್ದರು. ಬಾಂಗ್ಲಾದೇಶ ತನ್ನ ಕೊನೆಯ ಪಂದ್ಯವನ್ನು ಶನಿವಾರ ಪುಣೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಡೊನಾಲ್ಡ್‌ ಅವರು ತಮ್ಮ ಗುತ್ತಿಗೆ ನವೀಕರಣಕ್ಕೆ ವಿನಂತಿಸಿಲ್ಲ ಎಂದು ಬಿಸಿಬಿ ಮುಖ್ಯಸ್ಥ ನಿಝಾಮ್ ಉದ್ದೀನ್ ಚೌಧರಿ ಹೇಳಿದರು. ‘ಡೊನಾಲ್ಡ್‌ ಜೊತೆ ಈ ವಿಷಯ ಚರ್ಚೆ ಮಾಡಿಲ್ಲ’ ಎಂದು ಹೇಳುವ ಮೂಲಕ ಬಾಂಗ್ಲಾದೇಶ ತಂಡದ ಮುಖ್ಯ ಕೋಚ್‌ ಚಂಡಿಕಾ ಹತುರಸಂಘ ಅವರು ವಿವಾದದಿಂದ ಅಂತರ ಕಾಪಾಡಿಕೊಂಡರು. ಆದರೆ ಅವರು ತಂಡದ ವೇಗದ ಬೌಲರ್‌ಗಳ ಮೇಲೆ ಡೊನಾಲ್ಡ್‌ ಅವರ ಪ್ರಭಾವವನ್ನು ಶ್ಲಾಘಿಸಲು ಹಿಂಜರಿಯಲಿಲ್ಲ. ‘ಅವರು ತಮ್ಮ ಹೊಣೆಯನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ವೇಗದ ಬೌಲರ್‌ಗಳ ಯಶಸ್ಸಿಗೆ ಅವರ ಕೊಡುಗೆಯಿದೆ’ ಎಂದು ಪುಣೆಯಲ್ಲಿ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 2015ರ ವಿಶ್ವಕಪ್‌ವರೆಗೆ ದಕ್ಷಿಣ ಆಫ್ರಿಕಾ ವೇಗದ ಬೌಲಿಂಗ್‌ ಕೋಚ್‌ ಹೊಣೆ ಹೊತ್ತಿದ್ದ ಅವರು ನಂತರ ನ್ಯೂಜಿಲೆಂಡ್‌, ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತು ಶ್ರೀಲಂಕಾ ತಂಡಗಳ ಜೊತೆ ಒಂದೊ ಬೌಲಿಂಗ್‌ ಕೋಚ್‌ ಇಲ್ಲವೇ ಕನ್ಸಲ್ಟೆಂಟ್ ಆಗಿ ಕೆಲಸ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.