| ಪ್ರಬಲ ಆಸ್ಟ್ರೇಲಿಯಾಕ್ಕೆ ಇಂದು ಬಾಂಗ್ಲಾದೇಶ ಸವಾಲು ಪುಣೆ: ಮ್ಯಾಕ್ಸ್‌ವೆಲ್‌ ಅವರ ವಿಸ್ಮಯಕಾರಿ ಬ್ಯಾಟಿಂಗ್‌ನಿಂದ ಅಫ್ಗಾನಿಸ್ತಾನ ವಿರುದ್ಧ ಕಳೆದ ಪಂದ್ಯವನ್ನು ಪವಾಡದ ರೀತಿಯಲ್ಲಿ ಗೆದ್ದು ಸೆಮಿಫೈನಲ್‌ಗೆ ಸ್ಥಾನ ಭದ್ರಪಡಿಸಿಕೊಂಡಿರುವ ಆಸ್ಟ್ರೇಲಿಯಾ ತಂಡ, ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಶನಿವಾರ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ತಂಡ, ಈ ಬಾರಿ ಆರಂಭದ ಹಿನ್ನಡೆ ನಂತರ ಚೇತರಿಸಿಕೊಂಡ ರೀತಿ ಅಮೋಘ. ಕೊನೆಯ ಆರು ಪಂದ್ಯಗಳಲ್ಲಿ ಸತತವಾಗಿ ಜಯಗಳಿಸಿ ಬಲಪ್ರದರ್ಶನ ಮಾಡಿದೆ. ಬಾಂಗ್ಲಾದೇಶ ಟೂರ್ನಿಯಿಂದ ಈಗಾಗಲೇ ಹೊರಬಿದ್ದಿದೆ. ಎಡಗೈ ತೋರು ಬೆರಳಿನ ಗಾಯದಿಂದ ಶನಿವಾರದ ಪಂದ್ಯದಲ್ಲಿ ನಾಯಕ ಶಕಿಬ್ ಅಲ್ ಹಸನ್ ಅವರು ಶನಿವಾರ ಪಂದ್ಯದಲ್ಲಿ ಆಡುತ್ತಿಲ್ಲ. ಬುಧವಾರ, ಗ್ಲೆನ್ ಮ್ಯಾಕ್ಸ್‌ವೆಲ್‌ ಅವರ ಪವಾಡಸದೃಶ ಬ್ಯಾಟಿಂಗ್‌ (128 ಎಸೆತಗಳಲ್ಲಿ ಅಜೇಯ 201) ಕಾಂಗರೂ ಪಡೆಯನ್ನು ಸೋಲಿನ ಸುಳಿಯಿಂದ ಸ್ಮರಣೀಯ ವಿಜಯದೆಡೆಗೆ ತಲುಪಿಸಿತ್ತು. 7 ವಿಕೆಟ್‌ಗೆ 91 ರನ್‌ಗಳ ದಯನೀಯ ಸ್ಥಿತಿಯಿಂದ ತಂಡವು ಮತ್ತಷ್ಟು ವಿಕೆಟ್‌ ಕಳೆದುಕೊಳ್ಳದೇ 292 ರನ್‌ಗಳ ಗುರಿಯನ್ನು ತಲುಪಿತ್ತು. ಇನ್ನೊಂದೆಡೆ, ‘ಕಾವು ಏರಿದ’ ಪಂದ್ಯದಲ್ಲಿ ಬಾಂಗ್ಲಾದೇಶ ಮೂರು ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿತ್ತು. ಶ್ರೀಲಂಕಾದ ಅನುಭವಿ ಆಲ್‌ರೌಂಡರ್‌ ಏಂಜೆಲೊ ಮ್ಯಾಥ್ಯೂಸ್ ಈ ಪಂದ್ಯದಲ್ಲೇ ‘ಟೈಮ್ಡ್‌ ಔಟ್‌’ ಆಗಿದ್ದು, ಶಕಿಬ್‌ ಅವರ ಕ್ರೀಡಾ ಸ್ಫೂರ್ತಿಯ ಬಗ್ಗೆ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು. ಈ ಗೆಲುವಿನ ಮೂಲಕ ಬಾಂಗ್ಲಾ ತಂಡ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಆಸೆಯನ್ನು ಜೀವಂತವಾಗಿ ಉಳಿಸಿದೆ. ಆತಿಥೇಯ ಪಾಕಿಸ್ತಾನ ಸೇರಿದಂತೆ ಎಂಟು ತಂಡಗಳು ಈ ಟೂರ್ನಿಗೆ ಅರ್ಹತೆ ಪಡೆಯುತ್ತದೆ. ಎಡಗೈ ತೋರು ಬೆರಳಿನ ಗಾಯದಿಂದ ಶಕೀಬ್ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹಿಂದಿನ ಪಂದ್ಯದಲ್ಲಿ ಅವರು ಎರಡು ವಿಕೆಟ್‌ ಗಳಿಸಿದ್ದರ ಜೊತೆಗೆ ಅಮೂಲ್ಯ 82 ರನ್ (65 ಎಸೆತ) ಗಳಿಸಿದ್ದರು. ಅವರ ಅನುಪಸ್ಥಿತಿಯಲ್ಲಿ ನಜ್ಮುಲ್‌ ಹಸನ್‌ ಶಾಂತೊ ನಾಯಕತ್ವ ವಹಿಸಲಿದ್ದಾರೆ. ಅವರೂ ಲಯಕ್ಕೆ ಮರಳಿದ್ದು ಕಳೆದ ಪಂದ್ಯದಲ್ಲಿ 90 ರನ್‌ ಗಳಿಸಿದ್ದಾರೆ. ಡೇವಿಡ್‌ ವಾರ್ನರ್‌ (446 ರನ್‌) ಈ ವಿಶ್ವಕಪ್‌ನಲ್ಲಿ ಒಳ್ಳೆಯ ಫಾರ್ಮ್‌ನಲ್ಲಿದ್ದಾರೆ. ವಿಶ್ವಕಪ್‌ನ ಅತಿ ವೇಗದ ಶತಕ ಮತ್ತು ದ್ವಿಶತಕದೊಡನೆ ಮ್ಯಾಕ್ಸ್‌ವೆಲ್‌ 397 ರನ್‌ ಗಳಿಸಿದ್ದಾರೆ. ಮಿಚೆಲ್ ಮಾರ್ಷ್‌, ಟ್ರಾವಿಸ್‌ ಹೆಡ್ ಕೂಡ ವಿವಿಧ ಪಂದ್ಯಗಳಲ್ಲಿ ಉಪಯುಕ್ತ ಆಟವಾಡಿದ್ದಾರೆ. ಬಾಂಗ್ಲಾ ಬ್ಯಾಟರ್‌ಗಳಿಗೆ ಮಿಚೆಲ್‌ ಸ್ಟಾರ್ಕ್‌, ಜೋಶ್ ಹ್ಯಾಜಲ್‌ವುಡ್‌ ಅವರ ವೇಗದ ದಾಳಿಯನ್ನು ನಿಭಾಯಿಸುವ ಸವಾಲು ಇದೆ. ಇನಿಂಗ್ಸ್‌ನ ಮಧ್ಯದಲ್ಲಿ ಆ್ಯಡಂ ಜಂಪಾ ಅವರ ಮೊನಚಾದ ಸ್ಪಿನ್ ದಾಳಿ ಈವರೆಗೆ ಎದುರಾಳಿ ತಂಡಗಳಿಗೆ ಲಗಾಮು ತೊಡಿಸಿದೆ. ಅವರು ಟೂರ್ನಿಯಲ್ಲಿ 20 ವಿಕೆಟ್‌ ಪಡೆದಿದ್ದಾರೆ. ಮುಖಾಮುಖಿ ಆಡಿದ ಪಂದ್ಯಗಳು: 21 ಆಸ್ಟ್ರೇಲಿಯಾ ಗೆಲುವು: 19 ಬಾಂಗ್ಲಾ ಗೆಲುವು: 1 ಫಲಿತಾಂಶವಿಲ್ಲ 1 ಕೊನೆಯ 10 ಮುಖಾಮುಖಿಗಳಲ್ಲಿ 9ರಲ್ಲಿ ಆಸ್ಟ್ರೇಲಿಯಾ ಜಯಗಳಿಸಿದ್ದು, ಒಂದರಲ್ಲಿ ಫಲಿತಾಂಶ ಬಂದಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.