ಶ್ರೀಲಂಕಾ ಮಂಡಳಿ ಅಮಾನತುಗೊಳಿಸಿದ ಐಸಿಸಿ ಕೊಲಂಬೊ: ಕರ್ತವ್ಯ ನಿರ್ವಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ತಡೆಯಲು ಶ್ರೀಲಂಕಾದ ಕ್ರಿಕೆಟ್‌ ಮಂಡಳಿ ವಿಫಲವಾಗಿದೆ ಎಂದು ಹೇಳಿರುವ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌, ತಕ್ಷಣದಿಂದ ಜಾರಿಗೆ ಬರುವಂತೆ ಆ ದೇಶದ ಕ್ರಿಕೆಟ್‌ ಮಂಡಳಿಯನ್ನು ಪೂರ್ಣಾವಧಿ ಸದಸ್ಯ ಸ್ಥಾನದಿಂದ ಅಮಾನತುಗೊಳಿಸಿದೆ. ಮಂಡಳಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ನಡುವೆಯೇ, ರಾಜೀನಾಮೆ ನೀಡುವಂತೆ ಮಂಡಳಿಯ ಪದಾಧಿಕಾರಿಗಳಿಗೆ ಸೂಚಿಸಿ ಶ್ರೀಲಂಕಾದ ಸಂಸತ್ತು ಗುರುವಾರ ಸರ್ವಾನುಮತದ ನಿರ್ಣಯ ಕೈಗೊಂಡಿತ್ತು. ಇದರ ಮರುದಿನವೇ ಐಸಿಸಿ ಈ ಕ್ರಮ ಕೈಗೊಂಡಿದೆ. ‘ಕೌನ್ಸಿಲ್‌ ಸದಸ್ಯತ್ವ ಹೊಂದಿರುವ ಮಂಡಳಿ ತನ್ನ ಕರ್ತವ್ಯನಿರ್ಹವಣೆಯಲ್ಲಿ ವಿಫಲವಾಗಿದೆ. ಸ್ವಾಯತ್ತತೆ ಇದ್ದರೂ ತನ್ನ ವ್ಯವಹಾರ ಮತ್ತು ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ತಡೆಯುವಲ್ಲಿಯೂ ಮಂಡಳಿ ಗಂಭೀರ ಲೋಪ ಎಸಗಿದೆ ಎಂದು ಶುಕ್ರವಾರ ಸೇರಿದ ಐಸಿಸಿ ಮಂಡಳಿ ನಿರ್ಧಾರಕ್ಕೆ ಬಂದಿದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ‘ಅಮಾನತಿಗೆ ಸಂಬಂಧಿಸಿ ಷರತ್ತುಗಳನ್ನು ಐಸಿಸಿಯ ಆಡಳಿತ ಮಂಡಳಿ ಮುಂದಿನ ದಿನಗಳಲ್ಲಿ ನಿರ್ಧರಿಸಲಿದೆ ಎಂದೂ ಹೇಳಿಕೆ ತಿಳಿಸಿದೆ. ಕಳೆದ ಕೆಲವು ದಿನಗಳಿಂದ ಲಂಕಾ ಕ್ರಿಕೆಟ್‌ ಮಂಡಳಿ ಸಾಕಷ್ಟು ವಿವಾದಗಳಿಂದ ಸುದ್ದಿಯಲ್ಲಿದೆ. ಕಳೆದ ಸೋಮವಾರ, ಅಲ್ಲಿನ ಕ್ರೀಡಾ ಸಚಿವ ರೋಷನ್ ರಣಸಿಂಘೆ ಅವರು ಮಂಡಳಿಯನ್ನು ವಜಾಗೊಳಿಸಿ ಅರ್ಜುನ ರಣತುಂಗ ನೇತೃತ್ವದಲ್ಲಿ ಮಧ್ಯಂತರ ಸಮಿತಿ ನೇಮಕ ಮಾಡಿದ್ದರು. ಮರುದಿನವೇ ಅಲ್ಲಿನ ಮೇಲ್ಮನವಿ ನ್ಯಾಯಾಲಯ ಇದಕ್ಕೆ ತಡೆ ನೀಡಿ ಹಳೆಯ ಮಂಡಳಿಗೇ ಅಧಿಕಾರ ವಹಿಸಿತ್ತು. ಇದರ ಬೆನ್ನಲ್ಲೇ, ಮಂಡಳಿಯ ಪದಾಧಿಕಾರಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಿ ಆಡಳಿತ ಮತ್ತು ವಿಪಕ್ಷ ಸದಸ್ಯರು ಸಂಸತ್ತಿನಲ್ಲಿ, ಗುರುವಾರ ನಿರ್ಣಯ ಅಂಗೀಕರಿಸಿದ್ದರು. ಶ್ರೀಲಂಕಾ ಕ್ರಿಕೆಟ್‌ನಲ್ಲಿ ಹಣಕಾಸು ಅವ್ಯವಹಾರ, ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.