2023: ಟೀಕಾಕಾರರ ವಿರುದ್ಧ ಪಾಕ್‌ ನಾಯಕ ಬಾಬರ್‌ ಕಿಡಿ ಕೋಲ್ಕತ್ತ: ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ಟೀಕೆ ನಡೆಸುತ್ತಿರುವವರನ್ನು ತಂಡದ ನಾಯಕ ಬಾಬರ್‌ ಆಜಂ ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ತಂಡದ ಗೆಲುವಿನ ಅವಕಾಶ ಕ್ಷೀಣವಾಗಿದ್ದರೂ ಆ ಆಸೆಯನ್ನು ಬಿಟ್ಟುಕೊಡದ ಅವರು, ‘ಟಿ.ವಿ. ಚರ್ಚೆಯಲ್ಲಿ ಕುಳಿತು ಸಲಹೆ ಕೊಡುವುದು ಸುಲಭ’ ಎಂದು ಟೀಕಿಸಿದ್ದಾರೆ. ನ್ಯೂಜಿಲೆಂಡ್‌ ತಂಡವನ್ನು ಹಿಂದೆ ಹಾಕಿ ರನ್‌ರೇಟ್‌ ಆಧಾರದಲ್ಲಿ ಸೆಮಿಫೈನಲ್ ತಲುಪಬೇಕಾದರೆ ಶನಿವಾರ ನಡೆಯುವ ಪಂದ್ಯದಲ್ಲಿ ಪಾಕಿಸ್ತಾನ ಕಡೇಪಕ್ಷ 287 ರನ್‌ಗಳಿಂದ ಇಂಗ್ಲೆಂಡ್‌ ತಂಡವನ್ನು ಸೋಲಿಸಬೇಕಾಗುತ್ತದೆ. ಒಂದು ವೇಳೆ ಪಾಕ್‌ ಸೋತಲ್ಲಿ, ಮೂರು ವರ್ಷಗಳಿಂದ ನಾಯಕರಾಗಿರುವ ಬಾಬರ್ ಅವರು ಟೀಕಾಕಾರರಿಗೆ ಆಹಾರವಾಗಲಿದ್ದಾರೆ. ‘ವಿಶ್ವಕಪ್‌ನಲ್ಲಿ ನನ್ನ ಮೇಲಿಟ್ಟ ನಿರೀಕ್ಷೆಗೆ ತಕ್ಕಂತೆ ನಾನು ಆಡಿಲ್ಲ. ಹೀಗಾಗಿ ನಾನು ಒತ್ತಡದಲ್ಲಿದ್ದೇನೆಂದು ಹೇಳುತ್ತಾರೆ. ಆದರೆ ಹಾಗೇನೂ ಇಲ್ಲ’ ಎಂದು 29 ವರ್ಷದ ಬಾಬರ್ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.