ಸಿಕ್ಸರ್‌: ರೋಹಿತ್‌ ಶರ್ಮಾ ದಾಖಲೆ ಬೆಂಗಳೂರು: ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರು ನೆದರ್ಲೆಂಡ್ಸ್‌ ಎದುರಿನ ಪಂದ್ಯದಲ್ಲಿ ಕೆಲವೊಂದು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡರು. ಈ ಪಂದ್ಯದಲ್ಲಿ ಎರಡು ಸಿಕ್ಸರ್‌ ಹೊಡೆದ ಅವರು ಏಕದಿನ ಮಾದರಿಯಲ್ಲಿ ಒಂದು ಋತುವಿನಲ್ಲಿ ಅತ್ಯಧಿಕ ಸಿಕ್ಸರ್‌ (60) ಹೊಡೆದ ಬ್ಯಾಟರ್‌ ಎನಿಸಿಕೊಂಡರು. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಅವರು 2015 ರಲ್ಲಿ 58 ಸಿಕ್ಸರ್‌ ಹೊಡೆದದ್ದು ಇದುವರೆಗಿನ ದಾಖಲೆಯಾಗಿತ್ತು. ಏಕದಿನ ವಿಶ್ವಕಪ್‌ ಟೂರ್ನಿಯೊಂದರಲ್ಲಿ ಹೆಚ್ಚು ಸಿಕ್ಸರ್‌ (24) ಹೊಡೆದ ನಾಯಕ ಎಂಬ ಗೌರವ ಅವರಿಗೆ ಒಲಿಯಿತು. ಇಂಗ್ಲೆಂಡ್‌ನ ಎಯೊನ್‌ ಮಾರ್ಗನ್‌ (22) ಹೆಸರಿನಲ್ಲಿದ್ದ ದಾಖಲೆ ಮುರಿದರು. ಭಾರತ ತಂಡದ ನಾಯಕರುಗಳಲ್ಲಿ ವಿಶ್ವಕಪ್‌ನಲ್ಲಿ ಹೆಚ್ಚು ರನ್‌ ಗಳಿಸಿದ (503) ಆಟಗಾರ ಎಂಬ ಸಾಧನೆಯನ್ನೂ ರೋಹಿತ್‌ ತಮ್ಮದಾಗಿಸಿಕೊಂಡರು. ಈ ದಾಖಲೆ ಸೌರವ್ ಗಂಗೂಲಿ (2003ರ ಟೂರ್ನಿಯಲ್ಲಿ 465 ರನ್‌) ಹೆಸರಿನಲ್ಲಿತ್ತು. ಸತತ ಎರಡು ವಿಶ್ವಕಪ್‌ ಟೂರ್ನಿಗಳಲ್ಲಿ 500ಕ್ಕೂ ಅಧಿಕ ರನ್‌ ಗಳಿಸಿದ ಶ್ರೇಯಕ್ಕೂ ಮುಂಬೈನ ಬ್ಯಾಟರ್‌ ಭಾಜನರಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.