ವಿಶ್ಲೇಷಣೆ: ಸವಾಲು ಮೆಟ್ಟಿದ ‘ಕೂಲ್‌ ಕೋಚ್‌’‌ ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯೆಂದರೆ ಆಕರ್ಷಕ ಸಿಂಹಾಸನವೂ ಹೌದು, ಮುಳ್ಳುಗಳ ಗದ್ದುಗೆಯೂ ಹೌದು. ಈ ಹುದ್ದೆಗೇರುವವರಿಗೆ ಹಣ ಮತ್ತು ಹೆಸರು ಸಹಜವಾಗಿಯೇ ಒಲಿಯುತ್ತವೆ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಅಪಕೀರ್ತಿ, ವೈಫಲ್ಯಗಳು ಮತ್ತು ವಿವಾದ ಗಳ ಮುಳ್ಳುಗಳು ಇರಿಯುತ್ತವೆ. ಅಂತಹ ಹಲವಾರು ನಿದರ್ಶನಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಆದರೆ ರಾಹುಲ್ ಶರದ್ ದ್ರಾವಿಡ್ ಎಂಬ ‘ಗಟ್ಟಿ ಗೋಡೆ’ಯ ಮುಂದೆ ಈ ಮುಳ್ಳುಗಳು ಮೊನಚು ಕಳೆದುಕೊಂಡಿವೆ. ಭಾರತ ತಂಡದ ಮುಖ್ಯ ಕೋಚ್ ಆಗಿ ಎರಡು ವರ್ಷಗಳಿಂದ ಬೆಂಗಳೂರಿನ ದ್ರಾವಿಡ್ ನೀಡುತ್ತಿರುವ ಕಾಣಿಕೆ ಅಸಾಧಾರಣವಾದದ್ದು. ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ‘ಗೋಡೆ’ ಎಂದು ಖ್ಯಾತಿ ಗಳಿಸಿದ್ದ ರಾಹುಲ್ ತಮ್ಮ ಶಾಂತಸ್ವಭಾವದ ಕಾರ್ಯವೈಖರಿಯಿಂದಾಗಿ ‘ಕೂಲ್ ಕೋಚ್’ ಆಗಿದ್ದಾರೆ. ಈ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿರುವ ತಂಡದ ಗುಣಗಾನ ಎಲ್ಲೆಡೆಯೂ ನಡೆಯುತ್ತಿದೆ. ರೋಹಿತ್ ಬ್ಯಾಟಿಂಗ್, ಕೆ.ಎಲ್. ರಾಹುಲ್ ವಿಕೆಟ್‌ಕೀಪಿಂಗ್‌, ವಿರಾಟ್ ಕೊಹ್ಲಿ ಶತಕ, ಮೊಹಮ್ಮದ್ ಶಮಿಯ ಸ್ವಿಂಗ್, ಜಸ್‌ಪ್ರೀತ್‌ ಬೂಮ್ರಾ ಅವರ ಯಾರ್ಕರ್, ರವೀಂದ್ರ ಜಡೇಜ ಮತ್ತು ಕುಲದೀಪ್ ಯಾದವ್ ಸ್ಪಿನ್ ಮೋಡಿ ಚರ್ಚೆಯ ಕೇಂದ್ರಬಿಂದುವಾಗಿವೆ. ಆದರೆ ಇವೆಲ್ಲದರ ಹಿಂದೆ ದ್ರಾವಿಡ್ ಅವರ ‘ಸದ್ದಿಲ್ಲದ ಕಾರ್ಯದಕ್ಷತೆ’ ಇದೆ. 2021ರ ನವೆಂಬರ್‌ನಲ್ಲಿ ಭಾರತ ತಂಡಕ್ಕೆ ಕೋಚ್ ಆಗಿ ದ್ರಾವಿಡ್ ಆಯ್ಕೆಯಾದಾಗ ಬಹಳಷ್ಟು ಜನರ ಹುಬ್ಬೇರಿದ್ದವು. ಇವರಿಂದ ಸಾಧ್ಯವೇ ಎಂಬ ಪ್ರಶ್ನೆಗಳೂ ಕೇಳಿಬಂದಿದ್ದವು. ಏಕೆಂದರೆ, ಭಾರತ ತಂಡದಲ್ಲಿ ಮುಖ್ಯ ಕೋಚ್ ಆದವರಿಗೆ ಎದುರಾಗುವ ಸವಾಲುಗಳು ವಿಭಿನ್ನ. ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಕೋಟಿ ಕೋಟಿ ಮೌಲ್ಯ ಪಡೆದ ಹಾಗೂ ತಾರಾವರ್ಚಸ್ಸು ಗಳಿಸಿ ರಾಷ್ಟ್ರೀಯ ಬಳಗಕ್ಕೆ ಬಂದಿರುವ ಆಟಗಾರರಿಗೆ ‘ತರಬೇತಿ’ ನೀಡುವುದು ಸುಲಭವಲ್ಲ. ಅದಕ್ಕೆ ಅವರಿಗಿಂತಲೂ ದೊಡ್ಡ ತಾರೆಯಾಗಿದ್ದರೆ ಮಾತ್ರ ಸಾಧ್ಯ. ಈ ವಿಷಯದಲ್ಲಿ ವಿಶ್ವ ಕ್ರಿಕೆಟ್ ದಿಗ್ಗಜರಲ್ಲಿ ಒಬ್ಬರಾಗಿರುವ ದ್ರಾವಿಡ್ ಬಹುತೇಕ ಯಶಸ್ಸು ಸಾಧಿಸಿದ್ದಾರೆ. ದ್ರಾವಿಡ್ ಮುಖ್ಯ ಕೋಚ್ ಆದ ಸಂದರ್ಭದಲ್ಲಿ ಭಾರತದ ಕ್ರಿಕೆಟ್‌ನಲ್ಲಿ ಎಲ್ಲವೂ ಸರಿಯಿರಲಿಲ್ಲ. ಆಗಷ್ಟೇ ಕೋವಿಡ್ ಹೊಡೆತದಿಂದ ಜಗತ್ತು ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. ಕ್ರಿಕೆಟ್‌ನಲ್ಲಿಯೂ ಹಲವು ಹೊಸ ನಿಯಮಗಳು ಬಂದಿದ್ದವು. ಪ್ರಮುಖ ಬ್ಯಾಟರ್ ವಿರಾಟ್ ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿ ದ್ದರು. ಟಿ20 ನಾಯಕತ್ವಕ್ಕೆ ವಿದಾಯ ಘೋಷಿಸಿದ್ದ ವಿರಾಟ್ ಅವರನ್ನು ಏಕದಿನ ಕ್ರಿಕೆಟ್‌ ತಂಡದ ನಾಯಕತ್ವದಿಂದ ಬಿಸಿಸಿಐ ಕೆಳಗಿಳಿಸಿತ್ತು. ಇದು ವಿರಾಟ್ ಮತ್ತು ಬಿಸಿಸಿಐ ನಡುವಣ ಮುಸುಕಿನ ಗುದ್ದಾಟಕ್ಕೂ ಕಾರಣವಾಗಿತ್ತು. 2022ರ ಜನವರಿಯಲ್ಲಿ ಅವರು ಟೆಸ್ಟ್ ಕ್ರಿಕೆಟ್‌ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಈ ಬೆಳವಣಿಗೆಯ ನಡುವೆ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್ ಫಿಟ್‌ನೆಸ್ ಸಮಸ್ಯೆಯಿಂದ ಹೊರಬರುವ ಪ್ರಯತ್ನದಲ್ಲಿದ್ದರು. ಇನ್ನೊಂದೆಡೆ, 19 ವರ್ಷದೊಳಗಿನವರ ತಂಡಕ್ಕೆ ದ್ರಾವಿಡ್ ಕೋಚ್ ಆಗಿದ್ದ ಸಂದರ್ಭದಲ್ಲಿಯೇ ಬೆಳೆದು ನಿಂತಿದ್ದ ಯುವ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಹಾತೊರೆಯುತ್ತಿದ್ದರು. ಅನುಭವಿ ಆಟಗಾರರ ಪ್ರದರ್ಶನ ಮಟ್ಟವನ್ನು ಹೆಚ್ಚಿಸುವುದು ಮತ್ತು ಯುವಪ್ರತಿಭೆಗಳಿಗೆ ಅವಕಾಶ ನೀಡುವ ಸವಾಲುಗಳಿ ದ್ದವು. ದ್ರಾವಿಡ್ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರು. ತಾವು ಆಡುವ ದಿನಗಳಿಂದಲೂ ಫಿಟ್‌ನೆಸ್‌ಗೆ ಹೆಚ್ಚು ಮಹತ್ವ ಕೊಟ್ಟವರು ಅವರು. ಅಲ್ಲದೆ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದ ಅನುಭವಿ. ಕೋಚ್ ಆದ ನಂತರ ತಮ್ಮ ತಂಡದವರ ಫಿಟ್‌ನೆಸ್‌ಗೆ ಆದ್ಯತೆ ಕೊಟ್ಟರು. ಅದಕ್ಕಾಗಿ ಕಾರ್ಯಭಾರ ನಿರ್ವಹಣೆಗೆ ಪ್ರಾಶಸ್ತ್ಯ ಕೊಟ್ಟರು. ವರ್ಷವಿಡೀ ಮೂರು ಮಾದರಿಗಳಲ್ಲಿಯೂ ನಡೆಯುವ ಒಂದಿಲ್ಲೊಂದು ಸರಣಿ ಮತ್ತು ಪ್ರವಾಸಗಳ ಜೊತೆಗೆ ಐಪಿಎಲ್ ಟೂರ್ನಿಯಲ್ಲಿ ಆಡುವ ಆಕರ್ಷಣೆ. ಇದರಿಂದಾಗಿ ಪ್ರಮುಖ ಆಟಗಾರರಿಗೆ ಗಾಯದ ಸಮಸ್ಯೆ ವಿಪರೀತವಾಗಿತ್ತು. ಆದ್ದರಿಂದ ವಿಶ್ರಾಂತಿಯ ಅವಧಿಗೆ ಆದ್ಯತೆ ನೀಡಿದರು. ತಾವೂ ಕೆಲವು ಸರಣಿಗಳಿಂದ ವಿರಾಮ ತೆಗೆದುಕೊಂಡರು. ಅವರ ಅನುಪಸ್ಥಿತಿಯಲ್ಲಿ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಮಾರ್ಗದರ್ಶಕರಾಗಿ ತೆರಳಿದರು. ರೋಹಿತ್, ವಿರಾಟ್, ಜಡೇಜ ಅವರಂತಹ ಸೀನಿಯರ್ ಆಟಗಾರರು ವಿರಾಮ ತೆಗೆದುಕೊಂಡಾಗ ಹೊಸ ಹುಡುಗರಿಗೆ ಅವಕಾಶ ಕೊಡುವ ಪ್ರಯೋಗಗಳಿಗೆ ದ್ರಾವಿಡ್ ಕೈಹಾಕಿದರು. ಇದರ ಫಲವಾಗಿ ತಂಡವು ಬರೀ ಹತ್ತು ತಿಂಗಳ ಅವಧಿಯಲ್ಲಿ ಎಂಟು ನಾಯಕರನ್ನು ಕಾಣಬೇಕಾಯಿತು. ಅವರಲ್ಲಿ ಕೆ.ಎಲ್. ರಾಹುಲ್, ಶಿಖರ್ ಧವನ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ ಮತ್ತು ಜಸ್‌ಪ್ರೀತ್ ಬೂಮ್ರಾ ಅವರಿಗೂ ತಮ್ಮ ನಾಯಕತ್ವ ಗುಣ ತೋರುವ ಅವಕಾಶ ದೊರೆಯಿತು. ರೋಹಿತ್ ನಂತರ ತಂಡದ ಸಾರಥ್ಯ ವಹಿಸುವವರಿಗಾಗಿ ಹುಡುಕಾಟದ ಭಾಗವೂ ಈ ಪ್ರಯೋಗವಾಗಿತ್ತು. ಈ ಸಂದರ್ಭದಲ್ಲಿ ರಿಷಭ್ ಅಪಘಾತಕ್ಕೆ ತುತ್ತಾಗಿ ತಂಡದಿಂದ ಹೊರಬಿದ್ದಾಗ ವಿಕೆಟ್‌ ಕೀಪರ್ ಯಾರು ಎಂಬ ಪ್ರಶ್ನೆ ಮೂಡಿತು. ರಾಹುಲ್ ಕೂಡ ಐಪಿಎಲ್ ಸಂದರ್ಭದಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ತೆರಳಿದರು. ಇನ್ನೊಂದೆಡೆ ವೇಗಿ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಬ್ಯಾಟರ್ ಶ್ರೇಯಸ್ ಅಯ್ಯರ್ ಕೂಡ ಗಾಯಕ್ಕೆ ತುತ್ತಾಗಿ ದೀರ್ಘಕಾಲದವರೆಗೆ ಹೊರಗುಳಿದರು. ಹೋದ ವರ್ಷ ಟಿ20 ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಫೈನಲ್ ಸೋಲುಗಳೂ ಕಾಡಿದವು. ಆಗ ತೂರಿಬಂದ ಟೀಕೆಗಳನ್ನು ‘ವೆಲ್ ಲೆಫ್ಟ್‌’ (ಆಫ್‌ಸ್ಟಂಪ್ ಹೊರಗಿನ ಸ್ವಿಂಗ್ ಎಸೆತಗಳನ್ನು ತಡವದೇ ಬಿಡುವ ತಂತ್ರದಲ್ಲಿ ದ್ರಾವಿಡ್ ನಿಸ್ಸೀಮರಾಗಿದ್ದರು) ಮಾಡಿದರು. ಇದರ ನಡುವೆ ವಿಕೆಟ್‌ಕೀಪರ್ ಇಶಾನ್ ಕಿಶನ್ ಸಿದ್ಧವಾದರು. ಆರಂಭಿಕ ಬ್ಯಾಟರ್‌ ಆಗಿ ಶುಭಮನ್ ಗಿಲ್ ಮಿಂಚತೊಡಗಿದರು. ವೇಗಿ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಸ್ಪಿನ್ನರ್ ಕುಲದೀಪ್ ಯಾದವ್ ತಮಗೆ ಸಿಕ್ಕ ಅವಕಾಶಗಳಲ್ಲಿ ಕೌಶಲ ಮೆರೆದರು. ಈ ವಿಶ್ವಕಪ್ ಟೂರ್ನಿ ಆರಂಭವಾಗುವ ಒಂದು ತಿಂಗಳು ಮುನ್ನವೂ ರೋಹಿತ್ ಲಯಕ್ಕೆ ಮರಳಿರಲಿಲ್ಲ. ಇದು ಚಿಂತೆಯ ವಿಷಯವಾಗಿತ್ತು. ರಾಹುಲ್, ಶಮಿ, ಬೂಮ್ರಾ ಮತ್ತು ಶ್ರೇಯಸ್ ಫಿಟ್‌ನೆಸ್‌ ಸಾಬೀತುಪಡಿಸುವ ಪ್ರಯತ್ನದಲ್ಲಿದ್ದರು. ಆದರೆ ದ್ರಾವಿಡ್ ಅವರೆಲ್ಲರ ಮೇಲೂ ವಿಶ್ವಾಸವಿಟ್ಟರು. ಬಲಿಷ್ಠ ತಂಡ ಕಟ್ಟಿದರು. ಅದರ ಫಲವಾಗಿ ಇದೀಗ ರೋಹಿತ್ ಬಳಗ ಯಾರ ಮುಂದೂ ತಲೆಬಾಗದೆ ಮುನ್ನುಗ್ಗುತ್ತಿದೆ. ಮೊದಲ ಪಂದ್ಯದಲ್ಲಿಯೇ ಬಲಿಷ್ಠ ಆಸ್ಟ್ರೇಲಿಯಾ ಎದುರು ಎರಡು ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಕೊಹ್ಲಿ ಮತ್ತು ರಾಹುಲ್ ಜೊತೆಯಾಟ ಜಯದ ಹಾದಿ ತೋರಿತು. ಆರಂಭಿಕ ಬ್ಯಾಟರ್ ಆಗಿದ್ದ ರಾಹುಲ್ ಅವರನ್ನು ಮಧ್ಯಮ ಕ್ರಮಾಂಕಕ್ಕೆ ಕಳಿಸಿದ್ದ ದ್ರಾವಿಡ್ ಅವರ ದೂರಾಲೋಚನೆ ಫಲ ನೀಡಿತ್ತು. ಕಿವೀಸ್ ಎದುರಿನ ಪಂದ್ಯದಲ್ಲಿ ಹಾರ್ದಿಕ್ ಬೌಲಿಂಗ್ ಮಾಡುವಾಗ ಗಾಯಗೊಂಡರು. ಆಗ ವಿರಾಟ್ ಅವರನ್ನೇ ಆರನೇ ಬೌಲರ್‌ ಆಗಿ ಬಳಸಿಕೊಂಡರು. ಟೆಸ್ಟ್‌ ಪಂದ್ಯವೊಂದರಲ್ಲಿ 90 ಎಸೆತಗಳನ್ನು ಆಡಿ ಒಂದು ರನ್‌ ಗಳಿಸಿದ್ದ ದ್ರಾವಿಡ್, ದಕ್ಷಿಣ ಆಫ್ರಿಕಾದ ಎದುರಿನ ಏಕದಿನ ಪಂದ್ಯಗಳಲ್ಲಿ ಮಿಂಚಿನ ಬ್ಯಾಟಿಂಗ್ ಕೂಡ ಮಾಡಿದ್ದರು. ಫೀಲ್ಡಿಂಗ್, ಕೀಪಿಂಗ್‌ನಲ್ಲಿಯೂ ಮಿಂಚಿದ್ದವರು. ಅವರ ನಾಯಕತ್ವದಲ್ಲಿ ತಂಡವು ಕೆಲವು ಸಾಧನೆಗಳನ್ನೂ ಮಾಡಿತ್ತು. ಆದರೆ 2007ರ ವಿಶ್ವಕಪ್ ಟೂರ್ನಿಯಲ್ಲಿ ಅವರ ನಾಯಕತ್ವದ ತಂಡವು ಹೀನಾಯವಾಗಿ ಸೋತಿತ್ತು. ಇದೀಗ ಆ ಕಹಿಯನ್ನು ಮರೆಯುವ ಸಂದರ್ಭ ಬಂದಿದೆ. ದ್ರಾವಿಡ್ ಕೋಚ್ ಆಗಿ ತಂಡವನ್ನು ವಿಶ್ವಕಪ್ ಜಯದ ಸನಿಹಕ್ಕೆ ತಂದು ನಿಲ್ಲಿಸಿದ್ದಾರೆ. ಸೆಮಿಫೈನಲ್ ಮತ್ತು ಫೈನಲ್ ಸವಾಲುಗಳನ್ನು ಮೀರಿನಿಂತರೆ ಭಾರತವು ಸ್ವದೇಶಿ ಕೋಚ್‌ ಮಾರ್ಗದರ್ಶನದಲ್ಲಿ ಮಾಡಿದ ಐತಿಹಾಸಿಕ ಸಾಧನೆಯೂ ಇದಾಗಲಿದೆ. ಅದರ ರೂವಾರಿ ದ್ರಾವಿಡ್ ಆಗುತ್ತಾರೆಂಬುದೇ ಕರ್ನಾಟಕಕ್ಕೆ ಹೆಮ್ಮೆ. ಗಿರೀಶ ದೊಡ್ಡಮನಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.