ವಿಶ್ವಕಪ್ ಲೀಗ್‌ನಲ್ಲಿ ಅಧಿಕ ರನ್: ಕೊಹ್ಲಿ ಟಾಪರ್, ರೋಹಿತ್–ಗಿಲ್‌ಗೆ ಯಾವ ಸ್ಥಾನ? ಬೆಂಗಳೂರು: ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿವೆ. ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿರುವ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಟಿಕೆಟ್‌ ಗಿಟ್ಟಿಸಿವೆ. ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಈ ಹಂತದಲ್ಲಿ ಅಧಿಕ ರನ್‌ ಗಳಿಸಿದ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಸೆಮಿಫೈನಲ್‌ ಪಂದ್ಯಗಳು ನವೆಂಬರ್‌ 15, 16ರಂದು ಕ್ರಮವಾಗಿ ಮುಂಬೈ ಮತ್ತು ಕೋಲ್ಕತ್ತದಲ್ಲಿ ನಡೆಯಲಿವೆ. ರೌಂಡ್‌ ರಾಬಿನ್‌ ಮಾದರಿಯ ಲೀಗ್‌ ಹಂತದಲ್ಲಿ ಎಲ್ಲ ತಂಡಗಳು ತಲಾ 9 ಪಂದ್ಯಗಳಲ್ಲಿ ಸೆಣಸಾಟ ನಡೆಸಿವೆ. ಎಲ್ಲ ಪಂದ್ಯಗಳಲ್ಲಿಯೂ ಜಯ ಸಾಧಿಸಿರುವ ಭಾರತ, ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ತಲಾ 7ರಲ್ಲಿ ಜಯ ಸಾಧಿಸಿರುವ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಎರಡು ಮತ್ತು ಮೂರನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿವೆ. 5ರಲ್ಲಿ ಗೆಲುವು ಕಂಡಿರುವ ನ್ಯೂಜಿಲೆಂಡ್‌, ನಾಲ್ಕನೇ ಸ್ಥಾನ ಪಡೆದಿದೆ. ಮೊದಲ ಸೆಮಿಫೈನಲ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌, ಎರಡನೇ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಅಗ್ರ ಸ್ಥಾನದಲ್ಲಿ ಕೊಹ್ಲಿ ಅಮೋಘ ಲಯದಲ್ಲಿರುವ ವಿರಾಟ್‌ ಕೊಹ್ಲಿ ವಿಶ್ವಕಪ್‌ ಲೀಗ್ ಹಂತದಲ್ಲಿ ಅಧಿಕ ರನ್ ಗಳಿಸಿದ ಬ್ಯಾಟರ್‌ ಎನಿಸಿದ್ದಾರೆ. ಅವರು ಆಡಿರುವ 9 ಇನಿಂಗ್ಸ್‌ಗಳಲ್ಲಿ 2 ಶತಕ, 5 ಅರ್ಧ ಶತಕ ಸಹಿತ 594 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟನ್‌ ಡಿ ಕಾಕ್‌ (591), ನ್ಯೂಜಿಲೆಂಡ್‌ನ ರಚಿನ್‌ ರವೀಂದ್ರ (565), ಭಾರತ ತಂಡದ ನಾಯಕ ರೋಹಿತ್‌ ಶರ್ಮಾ (503) ಮತ್ತು ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ (499) ಕ್ರಮವಾಗಿ ನಂತರದ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ. 2019ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ಎದುರು ಸೋಲು ಕಂಡಿದ್ದ ಭಾರತ ತಂಡ ಈ ಬಾರಿ ಜಯ ಸಾಧಿಸುವುದೇ? ಐಸಿಸಿ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಶುಭಮನ್‌ ಗಿಲ್‌, ಅನಾರೋಗ್ಯ ಕಾರಣ ಟೂರ್ನಿಯ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದರು. ಅವರು 7 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿ 3 ಅರ್ಧಶತಕ ಸಹಿತ 270 ರನ್ ಕಲೆಹಾಕಿದ್ದಾರೆ. ಆ ಮೂಲಕ ಈ ಪಟ್ಟಿಯಲ್ಲಿ 34ನೇ ಸ್ಥಾನದಲ್ಲಿ ಉಳಿದಿದ್ದಾರೆ. ಸಚಿನ್‌ ದಾಖಲೆ ಮುರಿಯುವ ಸಾಧ್ಯತೆ ಭಾರತದ ಸಚಿನ್‌ ತೆಂಡೂಲ್ಕರ್‌ ಅವರು 2003ರ ವಿಶ್ವಕಪ್‌ ಟೂರ್ನಿಯಲ್ಲಿ 673 ರನ್ ಗಳಿಸಿದ್ದರು. ಇದು ಬ್ಯಾಟರ್‌ವೊಬ್ಬ ಒಂದೇ ಟೂರ್ನಿಯಲ್ಲಿ ಗಳಿಸಿದ ಗರಿಷ್ಠ ಸ್ಕೋರ್‌ ಆಗಿದೆ. ಸದ್ಯ ಈ ಬಾರಿಯ ಸೆಮಿಫೈನಲ್‌ಗೆ ಪ್ರವೇಶ ಪಡೆದಿರುವ ತಂಡಗಳ ಪೈಕಿ ನಾಲ್ವರು ಬ್ಯಾಟರ್‌ಗಳು 500ಕ್ಕಿಂತ ಅಧಿಕ ರನ್ ಗಳಿಸಿದ್ದಾರೆ. ಇದರಲ್ಲಿ ಮೊದಲ ಸೆಮಿಫೈನಲ್‌ನಲ್ಲಿ ಕಣಕ್ಕಿಳಿಯಲಿರುವ ಭಾರತದ ವಿರಾಟ್‌ ಕೊಹ್ಲಿ, ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಹಾಗೂ ಎರಡನೇ ಸೆಮಿಫೈನಲ್‌ನಲ್ಲಿ ಕಣಕ್ಕಿಳಿಯುವ ದಕ್ಷಿಣ ಆಫ್ರಿಕಾದ ಕ್ವಿಂಟನ್‌ ಡಿ ಕಾಕ್‌ 600 ರನ್‌ ಸನಿಹದಲ್ಲಿದ್ದಾರೆ. ಸೆಮಿಫೈನಲ್‌ ಫಲಿತಾಂಶ ಏನೇ ಆದರೂ, ವಿರಾಟ್‌ ಹಾಗೂ ರಚಿನ್ ಇಬ್ಬರಲ್ಲಿ ಒಬ್ಬರಿಗೆ (ಸೆಮಿಫೈನಲ್‌ ಸೇರಿ) ಎರಡು ಪಂದ್ಯ ಆಡುವ ಸಿಗಲಿದೆ. ಹೀಗಾಗಿ ಸಚಿನ್‌ ದಾಖಲೆಯನ್ನು ಮುರಿಯುವ ಸಾಧ್ಯತೆ ದಟ್ಟವಾಗಿದೆ. ಆ್ಯಡಂ ಜಂಪಾಗೆ ಹೆಚ್ಚು ವಿಕೆಟ್‌ ಆಸ್ಟ್ರೇಲಿಯಾದ ಆ್ಯಡಂ ಜಂಪಾ, ಲೀಗ್‌ ಹಂತದಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್‌ ಎನಿಸಿದ್ದಾರೆ. ಅವರು ಆಡಿರುವ 9 ಪಂದ್ಯಗಳಲ್ಲಿ 22 ವಿಕೆಟ್‌ ಕಬಳಿಸಿದ್ದಾರೆ. ಇಷ್ಟೇ ಪಂದ್ಯ ಆಡಿರುವ ಶ್ರೀಲಂಕಾದ ದಿಲ್ಶಾನ್ ಮಧುಶಂಕ 21 ವಿಕೆಟ್‌ ಪಡೆದಿದ್ದಾರೆ ದಕ್ಷಿಣ ಆಫ್ರಿಕಾದ ಜೆರಾಲ್ಡ್‌ ಕೋಜಿ (7 ಪಂದ್ಯ, 18 ವಿಕೆಟ್‌), ಪಾಕಿಸ್ತಾನದ ಶಾಹೀನ್‌ ಅಫ್ರಿದಿ (9 ಪಂದ್ಯ, 18 ವಿಕೆಟ್‌) ಮತ್ತು ಭಾರತದ ಜಸ್‌ಪ್ರೀತ್‌ ಬೂಮ್ರಾ (9 ಪಂದ್ಯ, 17 ವಿಕೆಟ್‌) ನಂತರದ ಸ್ಥಾನಗಳಲ್ಲಿದ್ದಾರೆ. ಆಡಿರುವ ಐದೇ ಇನಿಂಗ್ಸ್‌ಗಳಲ್ಲಿ 16 ವಿಕೆಟ್‌ ಪಡೆದಿರುವ ಮೊಹಮದ್ ಶಮಿ ಸಹ ರೇಸ್‌ನಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.