ಕಪ್‌ ಗೆಲ್ಲಲು ಇದು ಉತ್ತಮ ಅವಕಾಶ: ರವಿಶಾಸ್ತ್ರಿ ನವದೆಹಲಿ: ‘ಭಾರತ ತಂಡ ಆಡುತ್ತಿರುವ ರೀತಿಯನ್ನು ನೋಡಿದರೆ, ವಿಶ್ವಕಪ್‌ ಗೆಲ್ಲಲು ಇದು ಅತ್ಯುತ್ತಮ ಅವಕಾಶ’ ಎಂದು ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ‘ಭಾರತ ತಂಡ ಏಕದಿನ ವಿಶ್ವಕಪ್‌ಅನ್ನು 12 ವರ್ಷಗಳ ಹಿಂದೆ ಕೊನೆಯದಾಗಿ ಜಯಿಸಿತ್ತು. ಅಂತಹದೇ ಸಾಧನೆ ಪುನರಾವರ್ತಿಸುವ ಅವಕಾಶ ಈ ಬಾರಿ ಒದಗಿ ಬಂದಿದೆ’ ಎಂದು ಕಾರ್ಯಕ್ರಮವೊಂದರಲ್ಲಿ ತಿಳಿಸಿದರು. ‘ಈ ಬಾರಿ ಟ್ರೋಫಿ ಜಯಿಸಲು ವಿಫಲವಾದರೆ, ಚಾಂಪಿಯನ್‌ ಆಗಲು ಮತ್ತೆ ಕೆಲವು ವಿಶ್ವಕಪ್‌ಗಳವರೆಗೆ ಕಾಯಬೇಕಾಗಬಹುದು. ಆದ್ದರಿಂದ ತವರು ನೆಲದಲ್ಲಿ ಈಗ ಕಪ್‌ ಗೆಲ್ಲಲು ಲಭಿಸಿರುವ ಅವಕಾಶವನ್ನು ಬಳಸಿಕೊಳ್ಳಬೇಕು’ ಎಂದರು. ತಂಡದ ಬೌಲರ್‌ಗಳ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ‘ಬೌಲರ್‌ಗಳು ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಇಂತಹ ಬೌಲಿಂಗ್‌ ವಿಭಾಗ ತಂಡಕ್ಕೆ ರಾತ್ರೋರಾತ್ರಿ ಲಭಿಸಿಲ್ಲ. ಅವರು (ಬೌಲರ್‌ಗಳು) ಕಳೆದ 4–5 ವರ್ಷಗಳಿಂದ ಜತೆಯಾಗಿ ಆಡುವ ಮೂಲಕ ಅವರು ಈ ಹಂತ ತಲುಪಿದ್ದಾರೆ. ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದಾರೆ’ ಎಂದರು. ವೇಗಿಗಳಾದ ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್‌ ಸಿರಾಜ್‌ ಹಾಗೂ ಸ್ಪಿನ್ನರ್‌ಗಳಾದ ಕುಲದೀಪ್‌ ಯಾದವ್‌ ಮತ್ತು ರವೀಂದ್ರ ಜಡೇಜ ಅವರು ಈ ಟೂರ್ನಿಯಲ್ಲಿ ಎದುರಾಳಿ ತಂಡಗಳ ಬ್ಯಾಟರ್‌ಗಳನ್ನು ಕಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.