: ನೆದರ್ಲೆಂಡ್ಸ್ ತಂಡವನ್ನು 160 ರನ್ ಅಂತರದಿಂದ ಮಣಿಸಿದ ಭಾರತ ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಅಂತಿಮ ಲೀಗ್‌ ಪಂದ್ಯದಲ್ಲಿ ನೆದರ್ಲೆಂಡ್ಸ್‌ ತಂಡವನ್ನು 160 ರನ್‌ಗಳಿಂದ ಮಣಿಸಿದ ಭಾರತ ತಂಡ ಎಲ್ಲ 9 ಲೀಗ್ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಇದೇ 15ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಭಾರತ ನೀಡಿದ್ದ 411 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ತಂಡ 47.5 ಓವರ್‌ಗಳಲ್ಲಿ 250 ರನ್‌ಗಳಿಗೆ ಆಲೌಟ್ ಆಯಿತು. ನೆದರ್ಲೆಂಡ್ಸ್ ಪರ ತೇಹಾ ನಿಡಮನೂರು(54) ಅರ್ಧಶತಕ ಸಿಡಿಸಿದರೆ, ಸಿಬ್ರಾಂಡ್ ಎಂಗೆಲ್ಬ್ರೆಕ್ಟ್ 45 ರನ್ ಸಿಡಿಸಿದರು. ಭಾರತದ ಪರ ಒಂಬತ್ತು ಮಂದಿ ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು. ರೆಗ್ಯುಲರ್ ಬೌಲರ್‌ಗಳ ಜೊತೆ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್ ಸಹ ಬೌಲಿಂಗ್ ಮಾಡಿದರು. ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ, ಕಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರು. ಭಾರತದ ಬೃಹತ್ ಮೊತ್ತ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ನಾಯಕ ರೋಹಿತ್(61) ಮತ್ತು ಶುಭಮನ್ ಗಿಲ್ (51)ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ 100 ರನ್ ಕಲೆ ಹಾಕಿತು. ಗಿಲ್ ಪತನದ ಬಳಿಕ ಬಂದ ವಿರಾಟ್(51) ಸಹ ಅರ್ಧ ಶತಕ ಸಿಡಿಸಿದರು. ಕೊಹ್ಲಿ ನಿರ್ಗಮನದ ಬಳಿಕ ಶುರುವಾಗಿದ್ದೇ ಅಯ್ಯರ್ ಮತ್ತು ಕೆ.ಎಲ್. ರಾಹುಲ್ ಆಟ. ಅಬ್ಬರದ ಶತಕ ಸಿಡಿಸಿದ ಅಯ್ಯರ್– ರಾಹುಲ್ ನೆಂದರ್ಲೆಂಡ್ಸ್ ಬೌಲರ್‌ಗಳನ್ನು ತೀವ್ರವಾಗಿ ದಂಡಿಸಿದ ಶ್ರೇಯರ್ಸ್ ಅಯ್ಯರ್, ಕೆ.ಎಲ್‌. ರಾಹುಲ್ ಅಮೋಘ ಶತಕ ಸಿಡಿಸಿ ಸಂಭ್ರಮಿಸಿದರು. ಅಯ್ಯರ್ 94 ಎಸೆತಗಳಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 128 ರನ್ ಗಳಿಸಿದರೆ, ರಾಹುಲ್ 64 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 102 ರನ್ ಸಿಡಿಸಿದರು. ಅಂತಿಮವಾಗಿ ಭಾರತ ತಂಡ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಸಂಕ್ಷಿಪ್ತ ಸ್ಕೋರ್: ಭಾರತ ತಂಡ: ಬ್ಯಾಟಿಂಗ್ * ಶ್ರೇಯಸ್ ಅಯ್ಯರ್: 128 ರನ್ * ಕೆ.ಎಲ್. ರಾಹುಲ್: 102 ರನ್ ಬೌಲಿಂಗ್: *ಬಾಸ್ ಡಿ ಕೇಡೆ: 82/2 ನೆದರ್ಲೆಂಡ್ಸ್: 47.5 ಓವರ್‌ಗಳಲ್ಲಿ 250 ರನ್‌ಗಳಿಗೆ ಆಲೌಟ್ ಬ್ಯಾಟಿಂಗ್ * ತೇಹಾ ನಿಡಮನೂರು: 54 ರನ್ * ಸಿಬ್ರಾಂಡ್ ಎಂಗೆಲ್ಬ್ರೆಕ್ಟ್: 45 ರನ್ ಬೌಲಿಂಗ್: * ಜಸ್‌ಪ್ರೀತ್ ಬೂಮ್ರಾ: 33/2 * ಮೊಹಮ್ಮದ್ ಸಿರಾಜ್: 29/2 * ರವೀಂದ್ರ ಜಡೇಜಾ : 49/2 * ಕಲದೀಪ್ ಯಾದವ್: 41/2 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.